ADVERTISEMENT

ಮಹಿಳಾ ಸಬಲೀಕರಣಕ್ಕಾಗಿ ಪ್ರಧಾನಿ ಮೋದಿ ಅವರಿಂದ ಹಲವು ಯೋಜನೆ: ನಿರ್ಮಲಾ ಸೀತಾರಾಮನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಆಗಸ್ಟ್ 2021, 11:48 IST
Last Updated 21 ಆಗಸ್ಟ್ 2021, 11:48 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ಲಖನೌ: ಮಹಿಳಾ ಕೇಂದ್ರಿತ ಹಲವು ಯೋಜನೆಗಳನ್ನು ಜಾರಿಗೊಳಿಸುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶ್ಲಾಘಿಸಿದ್ದಾರೆ.

ಸಂಪುಟ ವಿಸ್ತರಣೆ ವೇಳೆ ಹಲವು ಮಹಿಳೆಯರಿಗೆ ಅವಕಾಶ ನೀಡಿರುವುದಕ್ಕಾಗಿಯೂ ನಿರ್ಮಲಾ ಅವರು, ಪ್ರಧಾನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಕೇಂದ್ರ ಸಚಿವ ಸಂಪುಟದಲ್ಲಿಸದ್ಯ ಹನ್ನೊಂದು ಮಹಿಳೆಯರಿದ್ದಾರೆ ಎಂದೂ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ʼಮಿಷನ್‌ ಶಕ್ತಿ3.0ʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಿರ್ಮಲಾ, ʼಮೋದಿಯವರು 2014ರಲ್ಲಿಪ್ರಧಾನಮಂತ್ರಿಯಾಗಿ ದೆಹಲಿಗೆ ಬರುವ ಮುನ್ನ, ತಾವು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಬಂದಿದ್ದ ಉಡುಗೊರೆಗಳನ್ನು ಹರಾಜಿಗೆ ಇಟ್ಟಿದ್ದರು. ಅದರಿಂದ ಬಂದ ಹಣವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದಾನ ಮಾಡಿದ್ದರುʼ ಎಂದು ನೆನಪಿಸಿಕೊಂಡಿದ್ದಾರೆ.

ADVERTISEMENT

ʼಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದರುʼ ಎಂದೂ ಹೇಳಿದ್ದಾರೆ.

ʼಉಜ್ವಲಾ ಯೋಜನೆ, ಜನಧನ್‌ ಅಥವಾ ಮುದ್ರಾ ಯೋಜನೆಗಳೇ ಆಗಿರಲಿ,ಕೇಂದ್ರವು ಪ್ರಾರಂಭಿಸಿದ ಹಲವು ಯೋಜನೆಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆʼ ಎಂದು ತಿಳಿಸಿದ್ದಾರೆ.

ಕೋವಿಡ್‌ ಲಸಿಕಾ ಅಭಿಯಾನದ ಬಗ್ಗೆ ಮಾತನಾಡಿದ ಸಚಿವೆ, ʼಕೆಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ಲಸಿಕೆ ಲಭ್ಯವಿಲ್ಲ. ಅವರು ಲಸಿಕೆಗಾಗಿ ಎದುರು ನೋಡುತ್ತಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರ ಪ್ರಯತ್ನಗಳಿಂದಾಗಿ ಭಾರತದಲ್ಲಿ ನಾವು ಆರು ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ನಾವು ದೇಶಕ್ಕೆ, ಮುಖ್ಯವಾಗಿ ದುರ್ಬಲ ವರ್ಗದ ಜನರಿಗೆ ವೇಗವಾಗಿ ಲಸಿಕೆ ಒದಗಿಸಲು ಬಯಸಿದ್ದೇವೆʼ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶ ಗವರ್ಜನರ್‌ ಆನಂದಿಬೆನ್‌ ಪಟೇಲ್‌ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.