ADVERTISEMENT

ತಮಿಳುನಾಡು: ಕೋಟ್ಯಂತರ ರೂಪಾಯಿಯ ಯೋಜನೆಗಳಿಗೆ ಚಾಲನೆ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವ ಪಡೆದ ಪ್ರಧಾನಿ ಭೇಟಿ

ಪಿಟಿಐ
Published 14 ಫೆಬ್ರುವರಿ 2021, 21:42 IST
Last Updated 14 ಫೆಬ್ರುವರಿ 2021, 21:42 IST
ಚೆನ್ನೈನಲ್ಲಿ ಭಾನುವಾರ ಮೆಟ್ರೊ ರೈಲು ಯೋಜನೆಯ ಮೊದಲನೇ ಹಂತದ ಉದ್ಘಾಟನಾ ಸಮಾರಂಭದಲ್ಲಿ  ಉಪಮುಖ್ಯಮಂತ್ರಿ ಓ. ಪನ್ನೀರಸೇಲ್ವಂ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಪಾಲ್ಗೊಂಡಿದ್ದರು  ಪಿಟಿಐ ಚಿತ್ರ
ಚೆನ್ನೈನಲ್ಲಿ ಭಾನುವಾರ ಮೆಟ್ರೊ ರೈಲು ಯೋಜನೆಯ ಮೊದಲನೇ ಹಂತದ ಉದ್ಘಾಟನಾ ಸಮಾರಂಭದಲ್ಲಿ  ಉಪಮುಖ್ಯಮಂತ್ರಿ ಓ. ಪನ್ನೀರಸೇಲ್ವಂ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಪಾಲ್ಗೊಂಡಿದ್ದರು  ಪಿಟಿಐ ಚಿತ್ರ   

ಚೆನ್ನೈ: ತಮಿಳುನಾಡಿನಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು.

₹3,370 ಕೋಟಿ ವೆಚ್ಚದಲ್ಲಿ ಮುಕ್ತಾಯಗೊಳಿಸಲಾದ ಚೆನ್ನೈ ಮೆಟ್ರೊ ರೈಲಿನ ಮೊದಲನೇ ಹಂತದ ವಿಸ್ತರಣೆ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು.

ಜತೆಗೆ, ಚೆನ್ನೈ ಬೀಚ್‌–ಅತ್ತಿಪಟ್ಟು ನಡುವಣ ನಾಲ್ಕನೇ ಮಾರ್ಗ ಹಾಗೂ ತಂಜಾವೂರು–ಮಾಯಿಲದುತುರೈ–ತಿರುವರ ನಡುವಣ ರೈಲ್ವೆ ವಿದ್ಯುದ್ದೀಕರಣ ಯೋಜನೆಯನ್ನು ಅವರು ಸಮರ್ಪಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ₹1,000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಐಐಟಿ ಮದ್ರಾಸ್‌ನ ‘ಡಿಸ್ಕವರಿ ಕ್ಯಾಂಪಸ್‌’ಗೆ ಶಂಕುಸ್ಥಾಪನೆ ನೆರವೇರಿಸಿದರು. ಎರಡು ಲಕ್ಷ ಚದರ ಮೀಟರ್‌ನಲ್ಲಿ ಈ ಕ್ಯಾಂಪಸ್‌ ನಿರ್ಮಾಣವಾಗಲಿದೆ.

ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ತಮಿಳುನಾಡಿಗೆ ಪ್ರಧಾನಿ ಭೇಟಿಯು ಮಹತ್ವ ಪಡೆದಿತ್ತು. ತಮಿಳು ಸಂಸ್ಕೃತಿ ಮತ್ತು ಶ್ರೀಲಂಕಾ ತಮಿಳರ ಆಶೋತ್ತರಗಳ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದರು.

ವೇದಿಕೆಯಲ್ಲಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಓ. ಪನ್ನೀರಸೇಲ್ವಂ ಅವರ ಕೈಗಳನ್ನು ಪ್ರಧಾನಿ ನರೇಂದ್ರ ಮೋದಿ ಎತ್ತುವ ಮೂಲಕ ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಮತ್ತು ಅವರ ಸಂಬಂಧಿ ಟಿ.ಟಿ.ವಿ ದಿನಕರನ್ ಅವರ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಸಂದೇಶವನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ‘ತಮಿಳುನಾಡಿನ ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯ ಕೈಗೊಳ್ಳುವುದು ಗೌರವದ ವಿಷಯವಾಗಿದೆ’ ಎಂದು ಹೇಳಿದರು. ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು, ತಮಿಳು ಸಂಸ್ಕೃತಿ ಬಗ್ಗೆ ಬಿಜೆಪಿಗೆ ಗೌರವ ಇಲ್ಲ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ಭಾನುವಾರ ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದರು.

‘ಜಗತ್ತಿನಲ್ಲೇ ತಮಿಳು ಅತ್ಯಂತ ಹಳೆಯ ಭಾಷೆಯಾಗಿದೆ. ಶ್ರೀಲಂಕಾ ತಮಿಳರ ಕಲ್ಯಾಣಕ್ಕೂ ಸರ್ಕಾರ ಬದ್ಧವಾಗಿದೆ. ನಿರಂತರವಾಗಿ ತಮಿಳರ ಏಳ್ಗೆಯ ಕುರಿತು ಶ್ರೀಲಂಕಾ ಜತೆ ಚರ್ಚಿಸಲಾಗುತ್ತಿದೆ. ಸಮಾನತೆಯಿಂದ, ಶಾಂತಿ ಮತ್ತು ಘನತೆಯಿಂದ ತಮಿಳರು ಬದುಕುವಂತೆ ಮಾಡಲು ಭಾರತ ಎಲ್ಲ ರೀತಿಯ ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ’ ಎಂದು ಪ್ರಧಾನಿ ಹೇಳಿದ್ದಾರೆ.

‘ಉತ್ತರ ಜಾಫ್ನಾಗೆ ಭೇಟಿ ನೀಡಿದ (2015ರಲ್ಲಿ) ಮೊದಲ ಪ್ರಧಾನಿ ನಾನು. ಅಭಿವೃದ್ಧಿ ಕ್ರಮಗಳ ಮೂಲಕ ತಮಿಳ ಸಮುದಾಯದ ಕಲ್ಯಾಣಕ್ಕೆ ಶ್ರಮಿಸಲಾಗುತ್ತಿದೆ’ ಎಂದರು.

‘ಈ ದಶಕ ಭಾರತದ್ದು. ಭಾರತದತ್ತ ಇಡೀ ಜಗತ್ತು ಸಕಾರಾತ್ಮಕ ಭಾವನೆಯಿಂದ ನೋಡುತ್ತಿದೆ. ಸರ್ಕಾರ ಸುಧಾರಣೆ ಕ್ರಮಗಳಿಗೆ ಬದ್ಧವಾಗಿದೆ ಎನ್ನುವುದನ್ನು ಈ ಬಾರಿಯ ಕೇಂದ್ರ ಬಜೆಟ್‌ ಸಾಬೀತುಪಡಿಸಿದೆ’ ಎಂದು ಹೇಳಿದರು.

ಪ್ರಧಾನಿ ಅವರು ಸಾಗಿದ ಮಾರ್ಗದಲ್ಲಿ ಬೆಂಬಲಿಗರು ಮತ್ತು ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಹಾಜರಿದ್ದು, ಘೋಷಣೆಗಳನ್ನು ಹಾಕಿದರು.

ಬಿಪಿಸಿಎಲ್‌ ಪೆಟ್ರೊ–ಕೆಮಿಕಲ್‌ ಕಾಂಪ್ಲೆಕ್ಸ್‌ ಸಮರ್ಪಣೆ
ಕೊಚ್ಚಿ: ಇಲ್ಲಿನ ಭಾರತ ಪೆಟ್ರೊಲಿಯಂನ ಪೆಟ್ರೊ–ಕೆಮಿಕಲ್‌ ಕಾಂಪ್ಲೆಕ್ಸ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸಿದರು.

₹6000 ಕೋಟಿ ವೆಚ್ಚದಲ್ಲಿ ಈ ಕಾಂಪ್ಲೆಕ್ಸ್‌ ನಿರ್ಮಿಸಲಾಗಿದೆ. ಎರಡು ‘ರೋಲ್‌–ಆನ್/ರೋಲ್‌ ಆಫ್‌’ ಹಡಗುಗಳಿಗೂ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಬೊಲ್ಗಾಟ್ಟಿ ಮತ್ತು ವಿಲ್ಲಿಂಗ್ಡನ್‌ ದ್ವೀಪಗಳ ನಡುವೆ ಈ ಹಡಗುಗಳನ್ನು ನಿಯೋಜಿಸಲಾಗಿದೆ. ವ್ಯಾಪಾರ ವಹಿವಾಟಿಗೆ ಈ ಹಡಗುಗಳಿಂದ ಅನುಕೂಲವಾಗಲಿದೆ.

ಇದೇ ಸಂದರ್ಭದಲ್ಲಿ ಕೊಚ್ಚಿನ್‌ ಬಂದರು ಟ್ರಸ್ಟ್‌ನ ಅಂತರರಾಷ್ಟ್ರೀಯ ಕ್ರ್ಯೂಸ್‌ ಟರ್ಮಿನಲ್‌ ಮತ್ತು ಕಡಲ ಎಂಜಿನಿಯರಿಂಗ್‌ ತರಬೇತಿ ಸಂಸ್ಥೆಯ ಶಿಪ್‌ಯಾರ್ಡ್‌ ವಿಜ್ಞಾನ ಸಾಗರ ಆವರಣವನ್ನು ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.