
ನವದೆಹಲಿ: ತಮ್ಮ ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳು ಸಾಮಾನ್ಯ ಜನರಿಗೆ ದೊಡ್ಡ ರೀತಿಯಲ್ಲಿ ಪ್ರಯೋಜನ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆಗಳು, ನಾವೀನ್ಯತೆಗೆ ಒತ್ತು ನೀಡುವುದು ಮತ್ತು ಆಡಳಿತವನ್ನು ಇನ್ನಷ್ಟು ಸರಳಗೊಳಿಸುವುದು– ಈ ಮೂರು ಮುಂದಿನ ದಶಕದ ತಮ್ಮ ಆದ್ಯತೆಗಳು ಎಂದಿದ್ದಾರೆ. ‘ಪಿಟಿಐ’ಗೆ ನೀಡಿದ ಸಂದರ್ಶನದಲ್ಲಿ ಅವರು ಆರ್ಥಿಕ ಸುಧಾರಣಾ ಕ್ರಮಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಮುಂದಿನ ದಶಕದಲ್ಲಿ ಯಾವ ಮೂರು ಆರ್ಥಿಕ ಸುಧಾರಣೆಗಳಿಗೆ ಆದ್ಯತೆ ನೀಡುತ್ತೀರಿ ಎಂಬ ಪ್ರಶ್ನೆಗೆ, ‘ನಮ್ಮ ಮುಂದಿರುವ ಗುರಿ ಸ್ಪಷ್ಟವಾಗಿದೆ. ಸುಧಾರಣಾ ಕ್ರಮಗಳನ್ನು ಒಂದು ನಿಗದಿತ ಸಂಖ್ಯೆಗೆ ಸೀಮಿತಗೊಳಿಸುವುದಿಲ್ಲ’ ಎಂದಿದ್ದಾರೆ.
‘ಮೊದಲನೆಯದಾಗಿ– ನಾವು ಸ್ಪರ್ಧಾತ್ಮಕತೆ ಮತ್ತು ತಯಾರಿಕೆಯನ್ನು ಹೆಚ್ಚಿಸಲು ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆ ತರುವುದನ್ನು ಮುಂದುವರಿಸುತ್ತೇವೆ. ಎರಡನೆಯದಾಗಿ– ತಂತ್ರಜ್ಞಾನ, ತಯಾರಿಕೆ ಮತ್ತು ಸೇವಾ ವಲಯದಲ್ಲಿ ನಾವೀನ್ಯತೆಯನ್ನು ಅಳವಡಿಸುತ್ತೇವೆ. ಮೂರನೆಯದಾಗಿ–ಜನರಿಗೆ ಮತ್ತು ಉದ್ದಿಮೆಗಳಿಗೆ ಸುಲಭವಾಗಿ ಹಾಗೂ ವಿಶ್ವಾಸಾರ್ಹತೆಯಿಂದ ಕಾರ್ಯನಿರ್ವಹಿಸಲು ಆಡಳಿತವನ್ನು ಇನ್ನಷ್ಟು ಸರಳಗೊಳಿಸುತ್ತೇವೆ’ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಬಂದ ಬಳಿಕ ಮಧ್ಯವರ್ತಿಗಳ ಕಾಟ ಕಡಿಮೆಯಾಗಿದೆ. ಮೂಲಸೌಕರ್ಯ ವಿಸ್ತರಣೆಯು ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಿದೆ. ಜನರ ಪ್ರಯಾಣ ಮತ್ತು ಸರಕು ಸಾಗಣೆ ವೆಚ್ಚವನ್ನು ಕಡಿತಗೊಳಿಸಿದೆ ಎಂದು ಸರ್ಕಾರದ ಸಾಧನೆಗಳನ್ನು ವಿವರಿಸಿದ್ದಾರೆ.
‘ಸಾಮಾನ್ಯವಾಗಿ, ‘ಸುಧಾರಣೆಗಳು’ ಎಂಬ ಪದವು ಆರ್ಥಿಕತೆ ಮತ್ತು ಉದ್ಯಮ ಕ್ಷೇತ್ರವನ್ನು ಮಾತ್ರ ಉಲ್ಲೇಖಿಸುತ್ತದೆ. ಆದರೆ ಸಾಮಾಜಿಕ ವಲಯದಲ್ಲಿನ ಸುಧಾರಣೆಗಳೂ ಅಷ್ಟೇ ಮುಖ್ಯ. ನಾವು ಆ ನಿಟ್ಟಿನಲ್ಲೂ ಗಮನ ಹರಿಸಿದ್ದೇವೆ’ ಎಂದಿದ್ದಾರೆ.
ಭಾರತವು ಇಂದು ವಿಶ್ವದಲ್ಲಿ ‘ಡಿಜಿಟಲ್ ನಾಯಕ’ ಆಗಿದೆ. ದೇಶದ ಜನರಿಗೆ ಯುಪಿಐ ಮೂಲಕ ವಹಿವಾಟು ನಡೆಸಲು ಅವಕಾಶ ಕಲ್ಪಿಸಿದ್ದರಿಂದ ಇದು ಸಾಧ್ಯವಾಗಿದೆನರೇಂದ್ರ ಮೋದಿ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.