ADVERTISEMENT

ಅಸ್ಸಾಂ ಚುನಾವಣೆ: ಅಧಿಕಾರಕ್ಕೇರುವುದಷ್ಟೇ ಕಾಂಗ್ರೆಸ್‌ನ ಉದ್ದೇಶ -ನರೇಂದ್ರ ಮೋದಿ

ಏಜೆನ್ಸೀಸ್
Published 21 ಮಾರ್ಚ್ 2021, 10:14 IST
Last Updated 21 ಮಾರ್ಚ್ 2021, 10:14 IST
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ   

ಗೋಲಘಾಟ್ (ಅಸ್ಸಾಂ):ಅಧಿಕಾರವನ್ನು ಭದ್ರಪಡಿಸಿಕೊಳ್ಳುವುದೇ ಕಾಂಗ್ರೆಸ್‌ನ ಏಕೈಕ ಉದ್ದೇಶ. ಅಸ್ಸಾಂ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಯಾವುದೇ ದೃಷ್ಟಿಕೋನವನ್ನು ಆ ಪಕ್ಷ ಹೊಂದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

ನಗರದಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ʼಅಸ್ಸಾಂ ಜನರಿಗೆ ಕಾಂಗ್ರೆಸ್‌ ಪಕ್ಷವು 5ಆಶ್ವಾಸನೆಗಳನ್ನು ನೀಡುತ್ತಿದೆ. ಸುಳ್ಳು ಹೇಳುವುದು ಮತ್ತು ಬಡವರಿಗೆ ಸುಳ್ಳಿನ ಭರವಸೆ ನೀಡುವುದು ಅವರ (ಕಾಂಗ್ರೆಸ್‌) ಏಕೈಕ ಮಂತ್ರವಾಗಿದೆ. ಅವರು ಯಾವುದೇ ಸಂದರ್ಭದಲ್ಲಿಯೂ ಅಧಿಕಾರವನ್ನು ಹಿಡಿಯಲು ಬಯಸಿದ್ದಾರೆ. ಏಕೆಂದರೆ, ಖಾಲಿಯಾಗಿರುವ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಅಧಿಕಾರಕ್ಕೇರುವ ಉದ್ದೇಶವನ್ನು ಕಾಂಗ್ರೆಸ್‌ ಹೊಂದಿದೆ. ಅವರುಅಸ್ಸಾಂ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಯಾವುದೇ ಚಿಂತನೆ ಅಥವಾ ದೃಷ್ಟಿಕೋನವನ್ನು ಹೊಂದಿಲ್ಲʼ ಎಂದು ಟೀಕಿಸಿದಾರೆ.

ಮುಂದುವರಿದು ಕಾಂಗ್ರೆಸ್‌ ನೀಡಿರುವ ಐದು ಖಾತರಿಗಳ ಭರವಸೆಯನ್ನು ಜನರು ನಂಬಬಾರದು ಎಂದು ಮನವಿ ಮಾಡಿರುವ ಪ್ರಧಾನಿ, ಇವು ಸುಳ್ಳು ಭರವಸೆಗಳಾಗಿವೆ ಎಂದು ತಿಳಿಸಿದ್ದಾರೆ.

ADVERTISEMENT

ʼಕಾಂಗ್ರೆಸ್‌ ಸರ್ಕಾರ ಇದ್ದಾಗ, ವಿಶ್ವಪ್ರಸಿದ್ದಘೇಂಡಾಮೃಗವನ್ನು ರಕ್ಷಿಸುವುದು ಹೇಗೆ ಎಂಬ ಪ್ರಶ್ನೆ ಇತ್ತು. ಆದರೆ, ಬಿಜೆಪಿಅಧಿಕಾರಕ್ಕೇರಿದ ಬಳಿಕ ಎಲ್ಲ ಕಳ್ಳ ಬೇಟೆಗಾರರನ್ನೂ ಜೈಲಿಗೆ ಕಳುಹಿಸಲಾಯಿತು. ಅಸ್ಸಾಂ ಸಂಸ್ಕೃತಿ, ಸಂಪ್ರದಾಯ, ಭಾಷೆ, ಹಬ್ಬಗಳು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ವಿಚಾರಗಳಾಗಿವೆ. ಇಂದು ಇಲ್ಲಿ ಕುಳಿತಿರುವ ನಮ್ಮ ಎಲ್ಲ ತಾಯಂದಿರು, ಸಹೋದರಿಯರು ಮತ್ತು ಮಕ್ಕಳಿಗೆ, ನೀವು ನಮಗೆ ನೀಡಿರುವ ಜವಾಬ್ದಾರಿ ಮತ್ತು ನಮ್ಮ ಮೇಲೆ ಇಟ್ಟಿರುವ ಭರವಸೆಗಳನ್ನು ಇಡೇರಿಸಲು ನಾವು ಬಹಳ ಶ್ರಮಿಸಿದ್ದೇವೆ ಎಂದು ತುಂಬಾ ಗೌರವದಿಂದ ಹೇಳಬಲ್ಲೆʼ ಎಂದಿದ್ದಾರೆ.

ಅಸ್ಸಾಂನಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆಯೂ ಮಾತನಾಡಿದ ಮೋದಿ, ʼಶ್ರೇಷ್ಠ ಯೋಧ ಲಚಿತ್‌ ಬರ್ಫುಕನ್‌ ಅವರ ಹೆಸರಿನಲ್ಲಿ ಎನ್‌ಡಿಎ ಸರ್ಕಾರವು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಚಿನ್ನದ ಪದಕ ಪ್ರಶಸ್ತಿ ಸ್ಥಾಪಿಸಿದೆ. ಕಾಜಿರಂಗ, ಅರಣ್ಯ ಪ್ರದೇಶಗಳು ಸೇರಿದಂತೆ ಎಲ್ಲ ಅಭಯಾರಣ್ಯಗಳು, ನಮ್ಮ ಪರಂಪರೆ, ಜವಾಬ್ದಾರಿಗಳು ಹಾಗೂ ನಮ್ಮ ಜೀವನೋಪಾಯದ ಸಾಧನಗಳಾಗಿವೆ. ಅಸ್ಸಾಂನಲ್ಲಿ ಕಳೆದ ಐದು ವರ್ಷಗಳಲ್ಲಿಅರಣ್ಯ ಪ್ರದೇಶವು ವಿಸ್ತರಣೆಯಾಗಿದೆ ಎಂದು ಹೇಳಲು ಸಂತೋಷವಾಗುತ್ತದೆʼ ಎಂದಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ಸುಮಾರು 40 ಸಾವಿರ ಕೋಟಿ ರೂ.ಗಳನ್ನು ತೈಲ ಮತ್ತು ಅನಿಲ ಕ್ಷೇತ್ರದಲ್ಲಿಯೇ ಹೋಡಿಕೆ ಮಾಡಲಾಗಿದೆ. ಅಸ್ಸಾಂ ದರ್ಶನ ಅಡಿಯಲ್ಲಿ ಬಿಜೆಪಿ ಮತ್ತು ಎನ್‌ಡಿಎ ಸರ್ಕಾರಗಳು ಸುಮಾರು9 ಸಾವಿರ ಪ್ರಾರ್ಥನಾ ಮಂದಿರಗಳು ಮತ್ತು ಇತರ ಧಾರ್ಮಿಕ ಕೇಂದ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿವೆ ಎಂದು ಹೇಳಿದ್ದಾರೆ.

ಈರ‍್ಯಾಲಿಯು ವಿಶ್ವಪ್ರಸಿದ್ಧ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಬಳಿ ನಡೆಯುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಕಾಂಗ್ರೆಸ್ ಪಕ್ಷವು ಕಳ್ಳ ಬೇಟೆಗಾರರನ್ನು ಬೆಂಬಲಿಸಿದೆ ಎಂದು ಆರೋಪಿಸಿದ್ದಾರೆ.

ʼದೆಹಲಿ ಮತ್ತು ಅಸ್ಸಾಂ ಎರಡೂ ಕಡೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ದಿನಗಳನ್ನು ಮರೆಯಲು ಯಾರಿಗೆ ಸಾಧ್ಯ. ಉದಾಸೀನತೆ ದುಪ್ಪಟ್ಟಾಗಿತ್ತು, ಭ್ರಷ್ಟಾಚಾರ ದುಪ್ಪಟ್ಟಾಗಿತ್ತು. ಅಕ್ರಮ ವಲಸೆಯೂ ವಿಪರೀತವಾಗಿತ್ತು. ಇದೀಗ ಈ ಡಬಲ್‌ ಇಂಜಿನ್‌ ಸರ್ಕಾರವು ಅಸ್ಸಾಂ ಅನ್ನು ಮುಂದಕ್ಕೆ ಕರೆದೊಯ್ಯುತ್ತಿದೆʼ ಎಂದು ಹೇಳಿಕೊಂಡಿದ್ದಾರೆ.

ಸದ್ಯ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಟೀ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಅಸಮಾಧಾನ ಹೊರಹಾಕಿದ್ದಾರೆ. ಕಳೆದ ಚುನಾವಣೆ ಸಂದರ್ಭದಲ್ಲಿ ನೀಡಿದ್ದಭರವಸೆಗಳನ್ನು ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಮಾರ್ಚ್‌ 27ರಿಂದ ಮೂರು ಹಂತಗಳಲ್ಲಿಚುನಾವಣೆ ನಡೆಯಲಿದ್ದು, ಮೇ 2ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.