ADVERTISEMENT

ಪಿಎಂಜಿಕೆಪಿ ಅನುಷ್ಠಾನವು ಹೊಸ ಉತ್ತರಪ್ರದೇಶವನ್ನು ವ್ಯಾಖ್ಯಾನಿಸುತ್ತದೆ:‌ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಆಗಸ್ಟ್ 2021, 10:44 IST
Last Updated 5 ಆಗಸ್ಟ್ 2021, 10:44 IST
   

ಲಖನೌ: ರಾಜ್ಯದಲ್ಲಿ ʼಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆʼಯನ್ನು (ಪಿಎಂಜಿಕೆಪಿ) ಅನುಷ್ಠಾನಗೊಳಿಸುತ್ತಿರುವ ರೀತಿಯು, ಹೊಸ ಉತ್ತರ ಪ್ರದೇಶವನ್ನು ವ್ಯಾಖ್ಯಾನಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಆಹಾರ ಭದ್ರತೆ ಯೋಜನೆ ಕುರಿತು ರಾಜ್ಯದಾದ್ಯಂತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಮೋದಿ,ಯೋಜನೆಯ ಫಲಾನುಭವಿಗಳೊಂದಿಗೆ ವರ್ಚುವಲ್‌ ಸಂವಾದ ನಡೆಸಿದರು. ಇದೇವೇಳೆ ಅವರು, ರಾಜ್ಯಕ್ಕೆ ಕಳುಹಿಸುತ್ತಿರುವ ಪ್ರತಿಯೊಂದು ಧಾನ್ಯವೂ ಫಲಾನುಭವಿಗಳನ್ನು ತಲುಪುತ್ತಿರುವುದು ಅಪಾರ ತೃಪ್ತಿತಂದಿದೆಎಂದರು.

ಯಾವುದೇ ಫಲಾನುಭವಿಯೂ ʼಪಿಎಂಜಿಕೆಪಿʼಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಸಲುವಾಗಿ ಈ ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ರೀತಿಯು ಹೊಸ ಉತ್ತರ ಪ್ರದೇಶವನ್ನು ವ್ಯಾಖ್ಯಾನಿಸುತ್ತದೆ. ಹಿಂದಿನ ಸರ್ಕಾರಗಳಿದ್ದಾಗ ಬಡವರಿಗೆ ಮೀಸಲಾದ ಆಹಾರ ಧಾನ್ಯಗಳನ್ನು ಲೂಟಿ ಮಾಡಲಾಗಿತ್ತು ಎಂದು ಆರೋಪಿಸಿದರು.

ADVERTISEMENT

ಮುಂದುವರಿದು,ಹಲವು ವರ್ಷಗಳಿಂದ ಉತ್ತರ ಪ್ರದೇಶವನ್ನು ಕೇವಲ ರಾಜಕೀಯದ ದೃಷ್ಟಿಯಿಂದಷ್ಟೇ ನೋಡಲಾಗುತ್ತಿದೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿಭಾಯಿಸುವಂತಹ ರಾಜ್ಯದ ಭವಿಷ್ಯದ ಬಗ್ಗೆ ಚರ್ಚೆ ಕೂಡ ನಡೆದಿಲ್ಲ. ಆದರೆ, ಕಳೆದ ಐದು ವರ್ಷಗಳಿಂದ ರಾಜ್ಯದ ʼಅಭಿವೃದ್ಧಿಯ ಎಂಜಿನ್‌ʼ ಅನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದರು.

ರಾಜ್ಯದಾದ್ಯಂತ ಮನೆ, ಶೌಚಾಲಯ, ವಿದ್ಯುತ್ ಮತ್ತುಅಡುಗೆ ಅನಿಲ ಒದಗಿಸಿರುವ ರಾಜ್ಯ ಸರ್ಕಾರ, ಇದೀಗ ಪ್ರತಿ ಮನೆಗೂ ಪೈಪ್‌ಲೈನ್‌ ಮೂಲಕ ನೀರು ಹರಿಸುವ ಕೆಲಸ ಮಾಡುತ್ತಿದೆ ಎಂದುಶ್ಲಾಘಿಸಿದರು.ಹಾಗೆಯೇ,ನಮ್ಮ ಸರ್ಕಾರವು ಸಮಾಜದ ಎಲ್ಲ ವರ್ಗದ ಜನರಿಗೂ ಯೋಜನೆಗಳ ಪ್ರಯೋಜನ ಸಿಗುವಂತೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.