ADVERTISEMENT

ಬ್ರಿಟನ್‌ನ ‘ಇಂಡಿಯಾ ಗ್ಲೋಬಲ್ ವೀಕ್’ ಉದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

ಪಿಟಿಐ
Published 7 ಜುಲೈ 2020, 14:13 IST
Last Updated 7 ಜುಲೈ 2020, 14:13 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಬ್ರಿಟನ್‌ನಲ್ಲಿ ಆಯೋಜಿಸಲಾಗಿರುವ ‘ಇಂಡಿಯಾ ಗ್ಲೋಬಲ್ ವೀಕ್ 2020’ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಾತನಾಡಲಿದ್ದಾರೆ. ಭಾರತದ ವಾಣಿಜ್ಯ ವಹಿವಾಟು ಮತ್ತು ಹೂಡಿಕೆ ಭವಿಷ್ಯದ ಬಗ್ಗೆ ಅವರು ಮಾತನಾಡುವ ನಿರೀಕ್ಷೆ ಇದೆ.

ಈ ಕಾರ್ಯಕ್ರಮವು ಭಾರತದ ಜಾಗತೀಕರಣಕ್ಕೆ ಸಂಬಂಧಿಸಿದ ಅತಿ ದೊಡ್ಡ ಅಂತರರಾಷ್ಟ್ರೀಯ ಕಾರ್ಯಕ್ರಮ ಎಂದು ಪರಿಗಣಿಸಲಾಗಿದೆ. ಕೊರೊನೋತ್ತರ ದಿನಗಳಲ್ಲಿ ಭಾರತವು ಅನೇಕ ಹೂಡಿಕೆ ಮತ್ತು ಉತ್ಪಾದನಾ ಅವಕಾಶಗಳನ್ನು ನೀಡುವ ಸಾಧ್ಯತೆಗಳಿಗೆ ಅನುವು ಮಾಡಿಕೊಡುವ ಈ ಕಾರ್ಯಕ್ರಮದಲ್ಲಿ ಮೋದಿಯವರು ಆನ್‌ಲೈನ್ ಮೂಲಕ ಭಾಗಿಯಾಗಲಿದ್ದಾರೆ.

‘ಇಡೀ ಜಗತ್ತು ಕೋವಿಡ್–19 ವಿರುದ್ಧ ಸೆಣಸುತ್ತಿರುವಾಗ ಭಾರತವು ತನ್ನಲ್ಲಿರುವ ಪ್ರತಿಭಾವಂತರು, ತಾಂತ್ರಿಕ ಸಾಮರ್ಥ್ಯ ಮತ್ತು ನಾಯಕತ್ವದಿಂದಾಗಿ ಜಾಗತಿಕ ವ್ಯವಹಾರಗಳಲ್ಲಿ ಪ್ರಮುಖ ಪಾತ್ರವಹಿಸಲಿದೆ. ಭಾರತದ ಪ್ರಧಾನ ಮಂತ್ರಿಯವರ ಸಂದೇಶವು ಇಡೀ ಜಗತ್ತಿನಲ್ಲಿ ಪ್ರತಿಧ್ವನಿಸಲಿದೆ ಎಂಬ ನಂಬಿಕೆ ನನಗಿದೆ’ ಎಂದು ಕಾರ್ಯಕ್ರಮದ ಆಯೋಜನೆಯ ಹಿಂದಿರುವ, ಬ್ರಿಟನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಇಂಡಿಯಾ ಇಂಕ್ ಗ್ರೂಪ್‌ನ ಸಿಇಒ ಮನೋಜ್ ಲಡ್ವಾ ಹೇಳಿದ್ದಾರೆ.

ADVERTISEMENT

ಮೂರು ದಿನಗಳ ಕಾರ್ಯಕ್ರಮವನ್ನು ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವರ್ಚುವಲ್ ಆಗಿ ಆಯೋಜಿಸಲಾಗುತ್ತಿದೆ. ಈಗಾಗಲೇ ನಿಗದಿಯಾಗಿರುವಂತೆ ಸಂಪುಟ ದರ್ಜೆಯ ಹಿರಿಯ ಸಚಿವರಾದ ಎಸ್.ಜೈಶಂಕರ್, ಪೀಯೂಷ್ ಗೋಯಲ್, ಹರ್‌ದೀಪ್ ಸಿಂಗ್ ಪುರಿ, ರವಿಶಂಕರ್ ಪ್ರಸಾದ್, ಮಹೇಂದ್ರ ನಾಥ್ ಪಾಂಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬ್ರಿಟನ್‌ ಪರವಾಗಿ ಪ್ರಿನ್ಸ್ ಚಾರ್ಲ್ಸ್ ವಿಶೇಷ ಭಾಷಣ ಮಾಡಲಿದ್ದಾರೆ. ಸಚಿವರಾದ ಡೊಮಿನಿಕ್ ರಾಬ್, ಪ್ರೀತಿ ಪಟೇಲ್, ಮ್ಯಾಟ್ ಹ್ಯಾನ್ಕಾಕ್ ಮತ್ತು ಲಿಜ್ ಟ್ರಸ್ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.