ADVERTISEMENT

ಪ್ರಧಾನಿ ಮೋದಿಯಿಂದ ನೇತಾಜಿಯ ಹೊಲೊಗ್ರಾಂ ಪ್ರತಿಮೆ ಅನಾವರಣ

ಪಿಟಿಐ
Published 23 ಜನವರಿ 2022, 14:52 IST
Last Updated 23 ಜನವರಿ 2022, 14:52 IST
ಪ್ರಧಾನಿ ಅನಾವರಣಗೊಳಿಸಿದ ನೇತಾಜಿ ಅವರ ಹೊಲೊಗ್ರಾಂ ಪ್ರತಿಮೆ
ಪ್ರಧಾನಿ ಅನಾವರಣಗೊಳಿಸಿದ ನೇತಾಜಿ ಅವರ ಹೊಲೊಗ್ರಾಂ ಪ್ರತಿಮೆ   

ನವದೆಹಲಿ: ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಹೊಲೊಗ್ರಾಂ ಸ್ವರೂಪದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂಜೆ ಇಲ್ಲಿನ ಇಂಡಿಯಾಗೇಟ್‌ ಬಳಿ ಅನಾವರಣಗೊಳಿಸಿದರು.

ನೇತಾಜಿ ಅವರ 125ನೇ ಜನ್ಮದಿನದಂದು ನಡೆದ ಈ ಕಾರ್ಯಕ್ರಮಕ್ಕೆ ಹಲವು ಪ್ರಮುಖರು ಸಾಕ್ಷಿಯಾದರು. ಅಮೃತಶಿಲೆಯಲ್ಲಿ ರೂಪಿಸುವ ಪ್ರತಿಮೆ ಸಿದ್ಧವಾಗುವವರೆಗೂ ಹೊಲೊಗ್ರಾಂ ಪ್ರತಿಮೆಯು ಈ ಸ್ಥಳದಲ್ಲಿರಲಿದೆ.

ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಗಣನೀಯ ಸಾಧನೆಗಾಗಿ ನೀಡುವ ಬೋಸ್‌ ಸ್ಮಾರಕ ‘ಅಪದಾ ಪ್ರಬಂಧನ್‌ ಪುರಸ್ಕಾರ್’ನ 2019–2022ರ ನಾಲ್ಕು ವರ್ಷದ ಪ್ರಶಸ್ತಿಗಳನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಪ್ರದಾನ ಮಾಡಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ‘ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಅವರು ನೀಡಿದ ಅನನ್ಯ ಕೊಡುಗೆ ಮತ್ತು ಅದಕ್ಕಾಗಿ ದೇಶ ಅವರಿಗೆ ಆಭಾರಿಯಾಗಿ ಇರುವುದರ ದ್ಯೋತಕವೇ ಈ ಪ್ರತಿಮೆ’ ಎಂದು ಪ್ರತಿಪಾದಿಸಿದರು.

‘ನಾವು ನೇತಾಜಿ ಅವರ ‘ಮಾಡಬಲ್ಲೆ, ಮಾಡುತ್ತೇನೆ’ ಎಂಬ ಚಿಂತನೆಯಿಂದ ಪ್ರೇರೇಪಣೆಗೊಂಡು ಮುನ್ನಡೆಯಬೇಕಿದೆ‘ ಎಂದು ಹೇಳಿದರು. ‘ಈ ಪ್ರತಿಮೆಯು ಈಗಿನ ಮತ್ತು ಭವಿಷ್ಯದ ಯುವಪೀಳಿಗೆಗೆ ಅವರ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಅವರ ಕರ್ತವ್ಯವನ್ನು ನೆನಪಿಸಿ, ಉತ್ತೇಜನ ನೀಡಲಿದೆ‘ ಎಂದು ಆಶಿಸಿದರು.

30000 ಲ್ಯುಮೆನ್ಸ್‌, 4ಕೆ ಸಾಮರ್ಥ್ಯದ ಪ್ರೊಜೆಕ್ಟರ್‌ ಬಳಸಿ ಹೊಲೊಗ್ರಾಂ ಪ್ರತಿಮೆ ಬಿಂಬಿಸಲಾಗಿದೆ. ಪ್ರತಿಮೆ ಚಿತ್ರ ಮೂಡುವಂತೆ ಶೇ 90ರಷ್ಟು ಪಾರದರ್ಶಕವಾದ ಪರದೆ ಅಳವಡಿಸಿದ್ದು, ಸಾಮಾನ್ಯ ನೋಟಕ್ಕೆ ಪರದೆ ಗೋಚರವಾಗದು.

ಮೂರು ಆಯಾಮದ (3ಡಿ) ನೇತಾಜಿ ಅವರ ಪ್ರತಿಮೆಯನ್ನು, ತಂತ್ರಜ್ಞಾನ ಬಳಸಿ ಈ ಪರದೆಯ ಮೇಲೆ ಮೂಡಿಸಲಾಗುತ್ತದೆ. ಹೊಲೊಗ್ರಾಂನ ಈ ಪ್ರತಿಮೆಯ ಎತ್ತರ 28 ಅಡಿ ಆಗಿದ್ದು, ಅಗಲ 6 ಆಡಿ ಆಗಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.