ADVERTISEMENT

ಮುಖ್ಯಮಂತ್ರಿಗಳ ಜತೆ ಮೋದಿ ಸಂವಾದ: ಈ ಹೊತ್ತಲ್ಲಿ ರಾಜಕೀಯ ಮಾಡಬೇಡಿ ಎಂದ ಮಮತಾ

ಏಜೆನ್ಸೀಸ್
Published 11 ಮೇ 2020, 12:37 IST
Last Updated 11 ಮೇ 2020, 12:37 IST
ವಿಡಿಯೊ ಸಂವಾದದಲ್ಲಿ  ಮೋದಿ (ಟ್ವಿಟರ್ ಚಿತ್ರ)
ವಿಡಿಯೊ ಸಂವಾದದಲ್ಲಿ ಮೋದಿ (ಟ್ವಿಟರ್ ಚಿತ್ರ)   

ನವದೆಹಲಿ: ‘ಲಾಕ್‌ಡೌನ್‌ 3.0’ ಮುಕ್ತಾಯಕ್ಕೆ ಆರು ದಿನಗಳು ಉಳಿದಿದ್ದು ಮುಂದಿನ ಕಾರ್ಯಯೋಜನೆಯ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ವಿಡಿಯೊ ಸಂವಾದ ನಡೆಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿನಡೆಸುತ್ತಿರುವ5ನೇ ವಿಡಿಯೊ ಸಂವಾದ ಇದಾಗಿದೆ. ಈ ಸಂವಾದದಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಭಾಗವಹಿಸಿದ್ದಾರೆ.

ಸಂವಾದದ ಮುಖ್ಯಾಂಶಗಳು

ವಲಸೆ ಕಾರ್ಮಿಕರು ಮತ್ತು ಕೊರೊನಾವೈರಸ್ ಲಾಕ್‍ಡೌನ್‌ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗ್ರಾಮಗಳಿಗೆ ಕೋವಿಡ್-19 ಹರಡದಂತೆಮಾಡುವುದು ನಮ್ಮ ಮುಂದಿರುವ ಸವಾಲು. ನೀವು ಎಲ್ಲಿದ್ದೀರೋ ಅಲ್ಲೇ ಇರಿ ಎಂದು ನಾವು ಜನರಲ್ಲಿ ಕೇಳಿಕೊಂಡಿದ್ದೆವು. ಆದರೆ ಮನೆಗೆ ಹೋಗಬೇಕು ಎಂಬುದು ಜನರ ಸ್ವಭಾವ.ಹಾಗಾಗಿ ನಮಗೆನಮ್ಮ ನಿರ್ಧಾರ ಬದಲಿಸಬೇಕಾಗಿ ಬಂತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ADVERTISEMENT

ಅಂತರ ರಾಜ್ಯ ಸಂಚಾರಕ್ಕೆ ಅನುಮತಿನೀಡಿರುವುದರಿಂದ ಬೇರೆಡೆ ಸಿಲುಕಿಕೊಂಡಿರುವ ಜನರು ಮನೆಗೆ ತಲುಪುವಂತಾಗಿದೆ.ಇಡೀ ದೇಶ ಜತೆಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಸಂವಾದದಲ್ಲಿ ಭಾಗವಹಿಸಿದ ಅರುಣಾಚಲ ಮುಖ್ಯಮಂತ್ರಿ ಪೇಮಾ ಖಂಡು ಹೇಳಿದ್ದಾರೆ.

ರೈಲು ಸೇವೆ ಆರಂಭಿಸಬೇಡಿ: ಕೆಸಿಆರ್

ರೈಲು ಸೇವೆ ಆರಂಭಿಸಬೇಡಿ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ರೈಲು ಸೇವೆ ಆರಂಭಿಸಿದರೆ ಕೊರೊನಾವೈರಸ್ ಸೋಂಕು ಹರಡುವಿಕೆ ಜಾಸ್ತಿಆಗುತ್ತದೆ, ತಪಾಸಣೆಯೂ ಕಷ್ಟವಾಗಲಿದೆ. ಕಂಟೈನ್‌ಮೆಂಟ್ ವಲಯದಲ್ಲಿ ಲಾಕ್‌ಡೌನ್ ಮುಂದುವರಿಸಬೇಕು ಎಂದು ಕೆಸಿಆರ್ ಒತ್ತಾಯಿಸಿದ್ದಾರೆ.

ಕಂಟೈನ್‌ಮೆಂಟ್ ವಲಯಕ್ಕೆ ಮಾತ್ರ ಲಾಕ್‍ಡೌನ್ ಇರಲಿ: ಗುಜರಾತ್ ಮುಖ್ಯಮಂತ್ರಿ
ಕಂಟೈನ್‌ಮೆಂಟ್ ವಲಯಕ್ಕೆ ಮಾತ್ರ ಲಾಕ್‌ಡೌನ್ ಸೀಮಿತಗೊಳಿಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಬೇಕು, ಬೇಸಿಗೆ ರಜೆ ಮುಗಿದ ನಂತರ ಶಾಲೆ, ಕಾಲೇಜುಗಳು ಆರಂಭಗೊಳ್ಳಬೇಕು ಎಂದಿದ್ದಾರೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ.

ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ವಿಂಗಡಿಸಲು ರಾಜ್ಯ ಸರ್ಕಾರಕ್ಕೆಅನುಮತಿ ನೀಡಿ: ಛತ್ತೀಸ್‌ಗಢ ಸಿಎಂ
ಕೊರೊನಾವೈರಸ್ ಸೋಂಕು ಇರುವ ಪ್ರದೇಶಗಳನ್ನು ಕೆಂಪು, ಕಿತ್ತಳೆ, ಹಸಿರು ವಲಯಗಳನ್ನಾಗಿ ವಿಂಗಡಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಬೇಕು ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಭಗೇಲ್ ಹೇಳಿದ್ದಾರೆ. ಹೀಗೆ ಮಾಡುವುದರಿಂದ ಸರಿಯಾದ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಪರಿಹಾರ ಕಾರ್ಯಗಳಿಗಾಗಿ ಕೇಂದ್ರದಿಂದ ಧನ ಸಹಾಯವನ್ನು ಇವರು ಕೇಳಿದ್ದಾರೆ. ಗುಜರಾತಿನಿಂದ ವಲಸೆ ಕಾರ್ಮಿಕರನ್ನು ಕರೆದುಕೊಂಡು ಬಂದ ಮೊದಲ ರೈಲು ಇವತ್ತು ತಲುಪಿದೆ, ರೋಗ ಲಕ್ಷಣಗಳಿರುವವರನ್ನು ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿರುವಂತೆ ಹೇಳಿದ್ದೇವೆ. ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಜನರನ್ನು ನಾವು ನಮ್ಮದೇ ಖರ್ಚಿನಲ್ಲಿ ಕರೆತರುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

2000 ಕೋಟಿ ವಿಶೇಷ ಅನುದಾನಕ್ಕೆ ತಮಿಳುನಾಡು ಒತ್ತಾಯ
ತಮಿಳುನಾಡು ರಾಜ್ಯಕ್ಕೆ ₹2000 ಕೋಟಿ ವಿಶೇಷ ಅನುದಾನ ನೀಡಬೇಕು ಮತ್ತು ಬಾಕಿ ಇರುವ ಜಿಎಸ್‌ಟಿಯನ್ನು ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ವಿನಂತಿಸಿದ್ದಾರೆ.

ನಮ್ಮ ಆರ್ಥಿಕತೆ ಸುಧಾರಣೆಗೆಒಗ್ಗೂಡಿ ದುಡಿಯಬೇಕು: ಆಂಧ್ರ ಸಿಎಂ
ಅಂತರ ರಾಜ್ಯ ವಸ್ತುಗಳ ಸಾಗಾಟಕ್ಕೆ ನಿರ್ಬಂಧ ಸಡಿಲಗೊಳಿಸಬೇಕು. ನಮ್ಮ ಆರ್ಥಿಕತೆ ಸುಧಾರಿಸಲು ಒಗ್ಗೂಡಿ ದುಡಿಯಬೇಕು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಸಿಎಂ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ)ವಲಯಕ್ಕೆ ಸಹಾಯ ಮಾಡಬೇಕು. ಆಂಧ್ರ ಪ್ರದೇಶದಲ್ಲಿ ಸರಿಸುಮಾರು 1 ಲಕ್ಷದಷ್ಟು ಎಂಎಸ್‌ಎಂಇ ನೌಕರರು ಇದ್ದಾರೆ.ಕೇಂದ್ರ ಸರ್ಕಾರ ಸಹಾಯ ಮಾಡದೇ ಇದ್ದರೆ ನಿರುದ್ಯೋಗ ಸಂಖ್ಯೆ ಜಾಸ್ತಿಯಾಗುತ್ತದೆ. ಔಷಧಿ ಸಿದ್ಧವಾಗುವವರೆಗೆ ಕೊರೊನಾವೈರಸ್‌ನೊಂದಿಗೆ ಬದುಕಲು ಜನರನ್ನು ತಯಾರು ಮಾಡಬೇಕು. ವೈರಸ್ ಹರಡದಂತೆ ತಡೆಯಲು ನಾವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.ಕೊರೊನಾ ಬಗ್ಗೆ ಇರುವ ಕಳಂಕ ಮತ್ತು ಭಯವನ್ನು ಹೋಗಲಾಡಿಸಬೇಕು. ರೋಗ ಬಾಧಿಸಿದವರಲ್ಲಿ ಶೇ.95ರಷ್ಟು ಮಂದಿ ಚೇತರಿಸುತ್ತಾರೆ ಎಂಬುದನ್ನು ನಾವು ಹೇಳಬೇಕು .ಆಂಧ್ರ ಪ್ರದೇಶದಲ್ಲಿ 30,000 ಜನರಿಗೆ ಕೊರೊನಾವೈರಸ್ ಸೋಂಕುಇರುವುದು ದೃಢಪಟ್ಟಿದೆ. ನಾವು ಸಹಜ ಸ್ಥಿತಿಗೆ ಬರಬೇಕು ಮತ್ತು ರೋಗದ ಬಗ್ಗೆ ಇರುವ ಕಳಂಕ ನಿಲ್ಲಬೇಕು. ಕೊರೊನಾ ಸೋಂಕಿತರ ಕುಟುಂಬಗಳು ಸಾಮಾಜಿಕ ಬಹಿಷ್ಕಾರಕ್ಕೊಳಗಾಗುತ್ತಿವೆ. ಸೆಲ್ಫ್ ಐಸೋಲೇಷನ್‌‌ನಲ್ಲಿರಲು ಜನರು ಮುಂದೆ ಬರಬೇಕು ಎಂದು ರೆಡ್ಡಿ ಹೇಳಿದ್ದಾರೆ.

ಈ ಪರಿಸ್ಥಿತಿಯಲ್ಲಿ ರಾಜಕೀಯ ಬೇಡ: ಮಮತಾ ಬ್ಯಾನರ್ಜಿ
ಕೊರೊನಾವೈರಸ್ ವಿರುದ್ಧ ನಾವು ನಮ್ಮ ಕೈಲಾದ ಹೋರಾಟ ಮಾಡುತ್ತಿದ್ದೇವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡಬಾರದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.