ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ ವಿಯೋಗಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
‘ನಿಮ್ಮ ತಾಯಿ ನಮಗೂ ತಾಯಿ ಇದ್ದಂತೆ‘ ಎಂದು ಮಮತಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮೊದಲ ವಂದೇ ಭಾರತ್ ರೈಲು ಉದ್ಘಾಟನೆ ಸಮಾರಂಭಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಹಾಜರಾದರು. ಮೋದಿಯವರು ತಾಯಿಯ ಅಂತ್ಯ ಸಂಸ್ಕಾರ ನೆರವೇರಿಸಿದ ಬಳಿಕ, ವರ್ಚ್ಯುವಲ್ ಆಗಿ ಕಾರ್ಯಕ್ರಮದಲ್ಲಿ ಭಾಗಿಯಾದರು.
ಈ ವೇಳೆ ಪ್ರಧಾನಿ ಮೋದಿ ಅವರಿಗೆ ಸಾಂತ್ವನ ಹೇಳಿದ ಮಮತಾ ಬ್ಯಾನರ್ಜಿ, ‘ದಯಮಾಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ನಿಮ್ಮ ತಾಯಿಯ ವಿಯೋಗಕ್ಕೆ ಹೇಗೆ ಸಂತಾಪ ಸೂಚಿಸಬೇಕು ಎಂದು ತಿಳಿಯುತ್ತಿಲ್ಲ. ನಿಮ್ಮ ತಾಯಿ ನಮಗೂ ತಾಯಿ ಇದ್ದಂತೆ. ನನಗೆ ನನ್ನ ತಾಯಿಯ ನೆನಪು ಆಗುತ್ತಿದೆ‘ ಎಂದು ಅವರು ಹೇಳಿದರು.
ಅಂತ್ಯ ಸಂಸ್ಕಾರ: ಅಮ್ಮನಲ್ಲಿ ತ್ರಿಮೂರ್ತಿಗಳನ್ನು ಕಂಡಿದ್ದೆ ಎಂದ ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ ಅಂತ್ಯ ಸಂಸ್ಕಾರ ಗಾಂಧಿನಗರದಲ್ಲಿರುವ ಚಿತಾಗಾರದಲ್ಲಿ ನೆರವೇರಿತು.
ತಾಯಿಯ ಪಾರ್ಥಿವ ಶರೀರದ ಅಂತಿಮ ಯಾತ್ರೆ ವೇಳೆ ಹೆಗಲು ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಶತಾಯುಷಿ ಹೀರಾಬೆನ್ (100) ಅವರು ಅನಾರೋಗ್ಯದಿಂದಾಗಿ ಶುಕ್ರವಾರ ಬೆಳಗಿನ ಜಾವ 3.39ಕ್ಕೆ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಅಹಮದಾಬಾದ್‌ನ ಯು.ಎನ್.ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆ್ಯಂಡ್ ರೀಸರ್ಚ್ ಸೆಂಟರ್ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿತ್ತು.
ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಗಾಂಧಿನಗರದ ಹೊರವಲಯದಲ್ಲಿರುವ ರಾಯ್‌ಸನ್ ಗ್ರಾಮಕ್ಕೆ ಆಗಮಿಸಿದ ಮೋದಿ ಅವರು, ಅಂತಿಮ ದರ್ಶನ ಪಡೆದರು.
'ನೂರು ವರ್ಷಗಳ ಶ್ರೇಷ್ಠ ಪ್ರಯಾಣ ಮುಗಿದಿದೆ. ಅಮ್ಮನಲ್ಲಿ ನಾನು ತ್ರಿಮೂರ್ತಿಗಳನ್ನು ಕಂಡಿದ್ದೇನೆ. ಅವರ ಜೀವನವು ತಪಸ್ವಿಯ ಪ್ರಯಾಣವಾಗಿತ್ತು. ನಿಷ್ಕಾಮ ಕರ್ಮಯೋಗಿಯ ಜೀವನ ಮತ್ತು ಮೌಲ್ಯಗಳಿಗೆ ಬದ್ಧವಾದ ಬದುಕಿನ ಸಂಕೇತವಾಗಿದ್ದರು' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, ಅವರ (ಅಮ್ಮನ) 100ನೇ ವರ್ಷದ ಹುಟ್ಟುಹಬ್ಬದಂದು ಭೇಟಿಯಾಗಿದ್ದಾಗ, ಸದಾ ನೆನಪಿನಲ್ಲಿ ಉಳಿಯುವಂತಹ ಮಾತನ್ನು ಹೇಳಿದ್ದರು. 'ನಿನ್ನ ತಲೆಯಿಂದ ಕೆಲಸ ಮಾಡು. ಜೀವನವನ್ನು ಶುದ್ಧತೆಯೊಂದಿಗೆ ಬದುಕು' ಎಂದಿದ್ದರು ಎಂದು ಸ್ಮರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.