ADVERTISEMENT

ಮೋದಿಯವರ ವಿಕಸಿತ ಭಾರತ ಜನಸಾಮಾನ್ಯರ ಜೇಬು ಬರಿದು ಮಾಡಿದೆ: ಮಲ್ಲಿಕಾರ್ಜುನ ಖರ್ಗೆ

ಪಿಟಿಐ
Published 27 ಫೆಬ್ರುವರಿ 2025, 10:03 IST
Last Updated 27 ಫೆಬ್ರುವರಿ 2025, 10:03 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ಸಾಮಾನ್ಯ ಭಾರತೀಯರ ಜೇಬುಗಳನ್ನು ಖಾಲಿ ಮಾಡಿ, ಆಯ್ದ ಶತಕೋಟ್ಯಧಿಪತಿಗಳನ್ನು ಜೋಳಿಗೆಯನ್ನು ತುಂಬಿಸಿದೆ. ಜನರಲ್ಲಿ ಖರ್ಚು ಮಾಡಲು ಹೆಚ್ಚಿನ ಆದಾಯ ಇಲ್ಲ’

– ಇದು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿರುವ ಪರಿ.

ADVERTISEMENT

‘ಭಾರತ ಜಾಗತಿಕ ಸುಂಕ ಹಾಗೂ ವ್ಯಾಪಾರ ಅಡೆತಡೆಗಳನ್ನು ಎದುರಿಸುತ್ತಿದೆ. ಆದರೆ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಈ ಬಗ್ಗೆ ಉಲ್ಲೇಖವೇ ಇಲ್ಲ’ ಎಂದು ಅವರು ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

‘ನರೇಂದ್ರ ಮೋದಿಯವರೇ, 100 ಕೋಟಿ ಭಾರತೀಯರಿಗೆ ಖರ್ಚು ಮಾಡಲು ಹೆಚ್ಚಿನ ಆದಾಯವೇ ಇಲ್ಲ. ನಮ್ಮ ಜಿಡಿಪಿಯ ಶೇ 60ರಷ್ಟು ಜನರ ಖರೀದಿಯಿಂದಲೇ ಅವಲಂಬಿತವಾಗಿದೆ. ಭಾರತದ ಶೇ 10 ರಷ್ಟು ಜನರು ಮಾತ್ರ ಆರ್ಥಿಕ ಬೆಳವಣಿಗೆ ಮತ್ತು ಬಳಕೆಯನ್ನು ಮುನ್ನಡೆಸುತ್ತಿದ್ದಾರೆ. ಶೇ 90 ರಷ್ಟು ಜನರಿಗೆ ಮೂಲಭೂತ ದೈನಂದಿನ ಅಗತ್ಯಗಳನ್ನು ಖರೀದಿಸುವ ಶಕ್ತಿಯೂ ಇಲ್ಲ’ ಎಂದು ಹೇಳಿದ್ದಾರೆ.

ತೆರಿಗೆ ಪಾವತಿಸುವ ಶೇ 50ರಷ್ಟು ಜನರ ವೇತನ ಕಳೆದ ದಶಕದಲ್ಲಿ ಕನಿಷ್ಠ ಏರಿಕೆಯಾಗಿದೆ ಅಥವಾ ಏರಿಕೆಯೇ ಕಂಡಿಲ್ಲ. ಹಳ್ಳಿಗಳಲ್ಲಿ ವೇತನ ಋಣಾತ್ಮಕ ಬೆಳವಣಿಗೆ ಕಂಡಿದೆ. ಸಂಪತ್ತಿನ ಕೇಂದ್ರೀಕರಣ ಹೆಚ್ಚಾಗುತ್ತಿದೆ. ನಿಮ್ಮ ನೀತಿಗಳು ಎಲ್ಲರಿಗೂ ಆದಾಯ ವಿತರಿಸುವಲ್ಲಿ ವಿಫಲವಾಗಿವೆ’ ಎಂದು ಕಿಡಿಕಾರಿದ್ದಾರೆ.

‘ಕಳೆದ 10 ವರ್ಷಗಳಲ್ಲಿ ಹೆಚ್ಚಳವಾಗದ ವೇತನ, ನಿರಂತರ ಹಣದುಬ್ಬರ ಹಾಗೂ ಬಳಕೆಯಲ್ಲಿ ಇಳಿಕೆಯಿಂದಾಗಿ ಮನೆಗಳಲ್ಲಿ ಉಳಿತಾಯ 50 ವರ್ಷಗಳ ಕನಿಷ್ಠಕ್ಕೆ ಇಳಿದಿದೆ. ಆದಾಯ ತಾರತಮ್ಯ 100 ವರ್ಷಗಳ ಗರಿಷ್ಠಕ್ಕೇರಿದೆ, ಮನೆಗಳಲ್ಲಿ ಸಾಲ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ನಿರುದ್ಯೋಗ ಪ್ರಮಾಣವು ಯುವಜನರಿಗೆ ಸಹಿಸಲಾಗದಷ್ಟು ಇದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.