ADVERTISEMENT

ಆ್ಯಪ್‌ ಅಭಿವೃದ್ಧಿಗೆ ಸ್ಪರ್ಧೆ

’ಆತ್ಮನಿರ್ಭರ ಭಾರತ ಆ್ಯಪ್‌ ಇನೋವೇಷನ್‌ ಚಾಲೆಂಜ್‌‘

ಪಿಟಿಐ
Published 4 ಜುಲೈ 2020, 14:14 IST
Last Updated 4 ಜುಲೈ 2020, 14:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಚೀನಾ ಮೂಲದ 59 ಆ್ಯಪ್‌ಗಳನ್ನು ನಿಷೇಧ ಮಾಡಿದ ಬೆನ್ನಲ್ಲೇ, ಹೊಸ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ಕೇಂದ್ರ ಸರ್ಕಾರ, ತಂತ್ರಜ್ಞರಿಗಾಗಿ ‘ಆತ್ಮನಿರ್ಭರ ಭಾರತ ಆ್ಯಪ್‌ ಇನ್ನೋವೇಷನ್‌ ಚಾಲೆಂಜ್‌’ ಘೋಷಿಸಿದೆ.

‘ದೇಶದ ಸ್ವಾರ್ಟ್‌ಅಪ್‌ಗಳು, ತಂತ್ರಜ್ಞರ ಸಮುದಾಯ ದೇಶೀಯ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲಿ. ಯಾರಿಗೆ ಗೊತ್ತು, ನೀವು ಅಭಿವೃದ್ಧಿಪಡಿಸಿದ ಆ್ಯಪ್‌ಗಳಲ್ಲಿ ಕೆಲವನ್ನು ನಾನೂ ಬಳಸಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಲಿಂಕ್ಡ್‌ಇನ್‌ನಲ್ಲಿ ಶನಿವಾರ ಬರೆದುಕೊಂಡಿದ್ದಾರೆ.

‘ಮೇಡ್‌ ಇನ್‌ ಇಂಡಿಯಾ ಆ್ಯಪ್‌’ಗಳನ್ನು ಅಭಿವೃದ್ಧಿಪಡಿಸುವ ವಿಷಯದಲ್ಲಿ ದೇಶದ ತಂತ್ರಜ್ಞರಲ್ಲಿ, ಸ್ಟಾರ್ಟ್‌ಅಪ್‌ಗಳಲ್ಲಿ ಸಾಕಷ್ಟು ಉತ್ಸಾಹ ಇದೆ.ಆವಿಷ್ಕಾರಗಳಿಗೆ, ನಾವೀನ್ಯತೆಗೆ ಉತ್ತೇಜನ ನೀಡುವ ಸಲುವಾಗಿ ಅಟಲ್‌ ಇನ್ನೋವೇಷನ್‌ ಮಿಷನ್‌ನ ಸಹಯೋಗದಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಹೊಸ ಸವಾಲನ್ನು (‘ಆತ್ಮನಿರ್ಭರ ಭಾರತ ಆ್ಯಪ್‌ ಇನ್ನೋವೇಷನ್‌ ಚಾಲೆಂಜ್‌’) ಅವರ ಮುಂದಿಟ್ಟಿದೆ’ ಎಂದಿದ್ದಾರೆ.

ADVERTISEMENT

‘ಕೋವಿಡ್‌–19 ಪಿಡುಗು ನಮ್ಮ ಪ್ರಗತಿಗೆ ಅಡ್ಡಿಯನ್ನುಂಟು ಮಾಡಿದೆ. ಆದರೆ, ತಂತ್ರಜ್ಞಾನದ ಸಮರ್ಥ ಬಳಕೆಯಿಂದ, ಈ ಪಿಡುಗು ತಂದಿಟ್ಟಿರುವ ಸಂಕಷ್ಟವನ್ನು ಎದುರಿಸಲು ಸಾಧ್ಯವಾಗಿದೆ’ ಎಂದೂ ಅವರು ತಮ್ಮ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮ ಪಾರಂಪರಿಕ ಕ್ರೀಡೆಗಳನ್ನು ಆ್ಯಪ್‌ಗಳ ಮೂಲಕ ಜನಪ್ರಿಯಗೊಳಿಸಲು ಸಾಧ್ಯವೇ? ಆಯಾ ವಯೋಮಾನದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಲಿಕೆ, ಗೇಮಿಂಗ್‌ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವೇ? ಆಪ್ತಸಮಾಲೋಚನೆಯೂ ಈ ಆ್ಯಪ್‌ಗಳ ಮೂಲಕವೇ ಸಾಧ್ಯವಾಗುವಂತೆ ಮಾಡಬಹುದೇ’ ಎಂಬ ಪ್ರಶ್ನೆಗಳನ್ನು ಮುಂದಿಟ್ಟಿರುವ ಮೋದಿ, ‘ಇಂದು ನಾವು ಎದುರಿಸುತ್ತಿರುವ ಎಷ್ಟೋ ಸಮಸ್ಯೆಗಳಿಗೆ ತಂತ್ರಜ್ಞಾನದಿಂದ ಉತ್ತರ ಕಂಡುಕೊಳ್ಳಬಹುದು’ ಎಂದು ಪ್ರತಿಪಾದಿಸಿದ್ದಾರೆ.

ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವ ರವಿಶಂಕರ್‌ ಪ್ರಸಾದ್‌ ಅವರು, ಪ್ರಧಾನಿಯ ಈ ಬರಹವನ್ನು ಟ್ವೀಟ್‌ ಮಾಡಿದ್ದಾರೆ.

ಎರಡು ಹಂತದ ಕಾರ್ಯಕ್ರಮ

‘ಆತ್ಮನಿರ್ಭರ ಭಾರತ ಆ್ಯಪ್‌ ಇನ್ನೋವೇಷನ್‌ ಚಾಲೆಂಜ್‌’ ಕಾರ್ಯಕ್ರಮ‘ಟ್ರ್ಯಾಕ್‌–01’,‘ಟ್ರ್ಯಾಕ್‌–02’ ಎಂದು ವಿಂಗಡಿಸಲಾಗಿದೆ.

‘ಟ್ರ್ಯಾಕ್‌–01’ ಅಡಿ ಉತ್ತಮ ಗುಣಮಟ್ಟದ ಆ್ಯಪ್‌ಗಳನ್ನು ಗುರುತಿಸುವುದು. ಈ ಕಾರ್ಯ ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಬೇಕು.‘ಟ್ರ್ಯಾಕ್‌–012’ ಅಡಿ, ಹೊಸ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತರಿಗೆ ತಂತ್ರಜ್ಞಾನ, ಮಾರುಕಟ್ಟೆಯಂತಹ ವಿಷಯಗಳಲ್ಲಿ ನೆರವು ಒದಗಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.