ಲೋಕಸಭೆ (ಸಾಂಕೇತಿಕ ಚಿತ್ರ)
ನವದೆಹಲಿ: ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಯವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಗೆ ಉತ್ತರ ನೀಡದೆಯೇ ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
‘ಕಾಂಗ್ರೆಸ್ ಸದಸ್ಯರು ದುರದೃಷ್ಟಕರ ಘಟನೆಗಳಿಗೆ ಕಾರಣವಾಗುವ ಅನಿರೀಕ್ಷಿತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇದ್ದ ಕಾರಣ ಸದನಕ್ಕೆ ಬಾರದಂತೆ ಪ್ರಧಾನಿ ಅವರಿಗೆ ನಾನೇ ಮನವಿ ಮಾಡಿದ್ದೆ’ ಎಂದು ಲೋಕಸಭಾಧ್ಯಕ್ಷ ಓಂಬಿರ್ಲಾ ಅವರು ಸದನಕ್ಕೆ ತಿಳಿಸಿದರು. ಸಭಾಧ್ಯಕ್ಷರ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ವಿರೋಧ ಪಕ್ಷ ಪ್ರತಿಭಟನೆ ನಡೆಸಿದ್ದರಿಂದ ವಂದನಾ ನಿರ್ಣಯದ ಚರ್ಚೆಗೆ 2004ರ ಜೂನ್‌ನಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಉತ್ತರ ನೀಡಿರಲಿಲ್ಲ. ಸಿಂಗ್ ಅವರು ಸದನದಲ್ಲಿ ಹಾಜರಿದ್ದರು ಮತ್ತು ತಮ್ಮ ಭಾಷಣವಿಲ್ಲದೆಯೇ ನಿರ್ಣಯದ ಮೇಲೆ ಮತ ಚಲಾಯಿಸುವಂತೆ ಮನವಿ ಮಾಡಿದ್ದರು.
ಭಾರತದ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ.ನರವಣೆ ಅವರ ‘ಅಪ್ರಕಟಿತ ಆತ್ಮಚರಿತ್ರೆ’ ಪುಸ್ತಕದಲ್ಲಿನ ವಿಚಾರವನ್ನು ಉಲ್ಲೇಖಿಸಲು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಅವಕಾಶ ನಿರಾಕರಿಸಿದ ಬಳಿಕ ಲೋಕಸಭೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ.
ಗುರುವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಕಲಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಯಿತು. ಬಳಿಕ ಸದನ ಸೇರಿದಾಗ ಓಂ ಬಿರ್ಲಾ ಅವರು ಧನ್ಯವಾದ ನಿರ್ಣಯ ಮಂಡಿಸಿದರು. ಆಗ ಸದನದಲ್ಲಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇರಲಿಲ್ಲ.
ಈ ವೇಳೆ, ವಿಪಕ್ಷಗಳ ಹಲವು ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು. ಮೊದಲು ವಿರೋಧ ಪಕ್ಷಗಳು ಸಲ್ಲಿಸಿದ ತಿದ್ದುಪಡಿಗಳನ್ನು ಓಂಬಿರ್ಲಾ ಮತಕ್ಕೆ ಹಾಕಿದರು. ಧ್ವನಿ ಮತದ ಮೂಲಕ ಈ ತಿದ್ದುಪಡಿಗಳನ್ನು ತಿರಸ್ಕರಿಸಲಾಯಿತು.
ನಂತರ, ರಾಷ್ಟ್ರಪತಿಯವರ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ನಿರ್ಣಯವನ್ನು ಸಭಾಧ್ಯಕ್ಷರು ಓದಿದರು. ವಿರೋಧ ಪಕ್ಷದ ಸದಸ್ಯರ ಘೋಷಣೆಗಳ ನಡುವೆಯೇ ಇದನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು. ಸದನವನ್ನು ಮಧ್ಯಾಹ್ನ 2 ಗಂಟೆಗೆ ಓಂಬಿರ್ಲಾ ಮುಂದೂಡಿದರು.
ಕಲಾಪ ಪುನರಾರಂಭಗೊಂಡಾಗ ವಿಪಕ್ಷ ಸದಸ್ಯರು ಮತ್ತೆ ಗದ್ದಲ ಎಬ್ಬಿಸಿದರು. ಕಲಾಪ 3 ಗಂಟೆಗೆ ಮುಂದೂಡಿಕೆಯಾಯಿತು. ಮಧ್ಯಾಹ್ನ 3 ಗಂಟೆಗೆ ಸದನಕ್ಕೆ ಮರಳಿದ ಬಿರ್ಲಾ, ಮೋದಿ ಅನುಪಸ್ಥಿತಿ ಮತ್ತು ಚರ್ಚೆಗೆ ಅವರು ಏಕೆ ಉತ್ತರಿಸಲಿಲ್ಲ ಎಂಬ ಬಗ್ಗೆ ವಿವರಣೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.