ADVERTISEMENT

ಮೋದಿಯವರಿಂದ ಅಸಾಂವಿಧಾನಿಕವಾಗಿ ರಾಷ್ಟ್ರ ಲಾಂಛನದ ಅನಾವರಣ: ಒವೈಸಿ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜುಲೈ 2022, 9:39 IST
Last Updated 12 ಜುಲೈ 2022, 9:39 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೊಸ ಸಂಸತ್‌ ಕಟ್ಟಡದ ಮೇಲೆ ಅಸಾಂವಿಧಾನಿಕವಾಗಿ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದ್ದಾರೆ ಎಂದು ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್‌ ಒವೈಸಿ ಆರೋಪಿಸಿದ್ದಾರೆ.

ಲಾಂಛನ ಅನಾವರಣದ ವೇಳೆ ಪ್ರಧಾನಿ ಎಲ್ಲಾ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

‘ಸಂವಿಧಾನವು ಸಂಸತ್ತು, ಸರ್ಕಾರ ಮತ್ತು ನ್ಯಾಯಾಂಗದ ಅಧಿಕಾರಗಳನ್ನು ಪ್ರತ್ಯೇಕಿಸಿದೆ. ಪ್ರಧಾನಿ ಸರ್ಕಾರದ ಮುಖ್ಯಸ್ಥರು. ಅವರು ರಾಷ್ಟ್ರೀಯ ಲಾಂಛನವನ್ನು ಅನಾವರಣ ಮಾಡುವಂತಿಲ್ಲ. ಸಂಸತ್‌ ಅನ್ನು ಲೋಕಸಭೆಯ ಸ್ಪೀಕರ್ ಪ್ರತಿನಿಧಿಸುತ್ತಾರೆ. ಅವರು ಸರ್ಕಾರಕ್ಕೆ ಅಧೀನರಲ್ಲ’ ಎಂದು ಒವೈಸಿ ಟ್ವೀಟ್‌ ಮಾಡಿ ಮನವರಿಕೆ ಮಾಡಿದ್ದಾರೆ.

ADVERTISEMENT

ಲಾಂಛನ ಅನಾವರಣದ ವೇಳೆ ಪೂಜಾ ಕೈಂಕರ್ಯಗಳನ್ನು ಕೈಗೊಂಡ ಬಗ್ಗೆ ಎಡಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿವೆ. ಇದು ಭಾರತದ ಜಾತ್ಯತೀತ ತತ್ವಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಆಕ್ಷೇಪಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ 9,500 ಕೆ.ಜಿ ತೂಕದ ಹಾಗೂ 6.5 ಮೀಟರ್‌ ಉದ್ದದ ಕಂಚಿನಲ್ಲಿ ಮಾಡಲಾದ, ರಾಷ್ಟ್ರ ಲಾಂಛನವನ್ನು ಸೋಮವಾರ ಅನಾವರಣಗೊಳಿಸಿದ್ದರು. ಈ ವೇಳೆ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ, ರಾಜ್ಯಸಭೆಯ ಉಪ ಸಭಾಧ್ಯಕ್ಷ ಹರಿವಂಶ ನಾರಾಯಣ ಸಿಂಗ್‌, ಕೇಂದ್ರ ಸಚಿವರಾದ ಹರ್ದೀಪ್‌ ಸಿಂಗ್‌ ಪುರಿ, ಪ್ರಲ್ಹಾದ್ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.