ADVERTISEMENT

ಪಿಎಂಸಿ ಬ್ಯಾಂಕ್‌ ಹಗರಣ: ಶಿವಸೇನಾ ನಾಯಕ ಸಂಜಯ್‌ ರಾವುತ್‌ ಪತ್ನಿಗೆ ಇ.ಡಿ ಸಮನ್ಸ್‌

ಪಿಟಿಐ
Published 28 ಡಿಸೆಂಬರ್ 2020, 4:35 IST
Last Updated 28 ಡಿಸೆಂಬರ್ 2020, 4:35 IST
ಶಿವಸೇನೆ ವಕ್ತಾರ ಸಂಜಯ್‌ ರಾವುತ್‌ (ಪಿಟಿಐ ಚಿತ್ರ)
ಶಿವಸೇನೆ ವಕ್ತಾರ ಸಂಜಯ್‌ ರಾವುತ್‌ (ಪಿಟಿಐ ಚಿತ್ರ)    

ಮುಂಬೈ: ಪಂಜಾಬ್‌-ಮಹಾರಾಷ್ಟ್ರ ಕೊ-ಆಪರೇಟಿವ್‌ (ಪಿಎಂಸಿ) ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.29ರ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಶಿವಸೇನೆಯ ವಕ್ತಾರ ಸಂಜಯ್ ರಾವುತ್‌ ಅವರ ಪತ್ನಿ ವರ್ಷಾ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಸಮನ್ಸ್‌ ನೀಡಿದೆ.

ಮುಂಬೈನ ಇ.ಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ವರ್ಷಾ ಅವರಿಗೆ ಇ.ಡಿ ಸೂಚಿಸಿದೆ. ಆರೋಗ್ಯದ ಕಾರಣಗಳಿಂದಾಗಿ ಈ ಹಿಂದಿನ ಎರಡು ವಿಚಾರಣೆಗೆ ಗೈರಾಗಿದ್ದ ವರ್ಷಾ ಅವರಿಗೆ ನೀಡಲಾಗುತ್ತಿರುವ ಮೂರನೇ ಸಮನ್ಸ್‌ ಇದಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆ ಅಡಿಯಲ್ಲಿ ವರ್ಷಾ ಅವರಿಗೆ ಸಮನ್ಸ್‌ ಜಾರಿ ಮಾಡಲಾಗಿದೆ.

ADVERTISEMENT

ಬ್ಯಾಂಕ್‌ನಿಂದ ಡ್ರಾ ಮಾಡಲಾದ ಹಣದ ರಶೀದಿಗಳಿಗೆ ಸಂಬಂಧಿಸಿದಂತೆ ವರ್ಷಾ ಅವರನ್ನು ಪ್ರಶ್ನಿಸಲು ಇ.ಡಿ ಬಯಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪಿಎಮ್‌ಸಿ ಬ್ಯಾಂಕ್‌ನ ಸಾಲ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು 'ಹೌಸಿಂಗ್ ಡೆವಲಪ್‌ಮೆಂಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್‌ಡಿಐಎಲ್)'ನ ಪ್ರವರ್ತಕರಾದ ರಾಕೇಶ್ ಕುಮಾರ್ ವಾಧವನ್ ಮತ್ತು ಅವರ ಪುತ್ರ ಸಾರಂಗ್ ವಾಧವನ್, ಮಾಜಿ ಅಧ್ಯಕ್ಷ ವಾರಿಯಂ ಸಿಂಗ್ ಮತ್ತು ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ವಿರುದ್ಧ ಪಿಎಂಎಲ್‌ಎ ಪ್ರಕರಣ ದಾಖಲಿಸಿದೆ.

ಕೇಂದ್ರ ತನಿಖಾ ಸಂಸ್ಥೆಗಳು ಈ ಹಗರಣದಲ್ಲಿ ತಮ್ಮನ್ನು ಗುರಿಯಾಗಿಸಿಕೊಂಡಿವೆ ಎಂದು ಎನ್‌ಸಿಪಿ ಮತ್ತು ಕಾಂಗ್ರೆಸ್‌ ಈ ಹಿಂದೆಯೇ ಆರೋಪಿಸಿವೆ.

ಇನ್ನೂ, ಈ ಬಗ್ಗೆ ಬಿಜೆಪಿ ನಾಯಕ ಕಿರಿತ್ ಸೋಮಯ ಅವರು ಟ್ವೀಟ್‌ ಮಾಡಿದ್ದಾರೆ. 'ಸಂಜಯ್ ರಾವುತ್‌ ಕುಟುಂಬಕ್ಕೆ ಇಡಿ ನೋಟಿಸ್ ನೀಡಿರುವ ಸಂಗತಿ ತಿಳಿಯಿತು. ಅವರ ಕುಟುಂಬಸ್ಥರು ಹಗರದಲ್ಲಿ ಫಲಾನುಭವಿಗಳೇ? ಈ ಮೊದಲು ಯಾವುದೇ ವಿಚಾರಣೆ ನಡೆದಿತ್ತೇ, ನೋಟಿಸ್ ಬಂದಿತ್ತೇ? ರಾವುತ್ ನಮಗೆ ಉತ್ತರ ನೀಡುತ್ತಾರೆಯೇ? ಸುಮಾರು 10 ಲಕ್ಷ ಠೇವಣಿದಾರರು ಆತಂಕದಲ್ಲಿದ್ದಾರೆ. ಇದರಲ್ಲಿ ರಾಜಕೀಯ ರಕ್ಷಣೆಯು ಆರೋಗ್ಯಕವಾದದ್ದಲ್ಲ. ಎಲ್ಲರೂ ಪಿಎಂಸಿ ಬ್ಯಾಂಕಿನ ಪುನರುಜ್ಜೀವನವನ್ನು ಬಯಸುತ್ತಾರೆ,' ಎಂದು ಹೇಳಿದ್ದಾರೆ.

ಎನ್‌ಸಿಪಿ ಸೇರಿದ ಬಿಜೆಪಿ ನಾಯಕನಿಗೂ ಇ.ಡಿ ಬಿಸಿ

ಇತ್ತೀಚೆಗೆ ಶರದ್ ಪವಾರ್ ಅವರ ಎನ್‌ಸಿಪಿ ಸೇರಿದ್ದ ಬಿಜೆಪಿಯ ಮಾಜಿ ನಾಯಕ ಏಕನಾಥ್ ಖಡ್ಸೆಗೆ ಪುಣೆಯ ಭೋಸ್ರಿ ಭೂ ವ್ಯವಹಾರದಲ್ಲಿ ಇ.ಡಿ ಬಿಸಿ ಮುಟ್ಟಿಸಿದೆ. ಪ್ರಕರಣದಲ್ಲಿನ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಡಿಸೆಂಬರ್ 30 ರಂದು ಮುಂಬೈನಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್‌ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.