ADVERTISEMENT

ಪಿಎಂಎಲ್‌ಎ ತಿದ್ದುಪಡಿ ಕಾಯ್ದೆ ಮರುಪರಿಶೀಲನೆಗೆ ಆಗ್ರಹ

17 ಪಕ್ಷಗಳ ನಾಯಕರು ಸಹಿ ಮಾಡಿರುವ ಜಂಟಿ ಹೇಳಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 21:15 IST
Last Updated 3 ಆಗಸ್ಟ್ 2022, 21:15 IST
   

ನವದೆಹಲಿ: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ತಿದ್ದುಪಡಿಗಳು ಹಾಗೂ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಗಳನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ತೀರ್ಪಿನಿಂದ ದೀರ್ಘಕಾಲೀನ ಪರಿಣಾಮಗಳು ಉಂಟಾಗಲಿವೆ ಎಂದು ಆತಂಕ ವ್ಯಕ್ತಪಡಿಸಿರುವ ಪ್ರತಿಪಕ್ಷಗಳು, ತೀರ್ಪಿನ ಪುನರ್ ಪರಿಶೀಲನೆ ಅಗತ್ಯ ಎಂದು ಅಭಿಪ್ರಾಯಪಟ್ಟಿವೆ.

ಕಾಂಗ್ರೆಸ್, ಟಿಎಂಸಿ, ಎಎಪಿ ಸೇರಿದಂತೆ 17 ಪಕ್ಷಗಳ ನಾಯಕರು ಸಹಿ ಮಾಡಿರುವ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ‘ತಿದ್ದುಪಡಿಗಳಿಂದ ಸರ್ಕಾರಕ್ಕೆ ಇನ್ನಷ್ಟು ಬಲ ಬರಲಿದೆ. ಆದರೆ, ಇದನ್ನು ವಿರೋಧ ಪಕ್ಷಗಳನ್ನು ದುರುದ್ದೇಶಪೂರ್ವಕವಾಗಿ ಹಣಿಯಲು ಹಾಗೂ ರಾಜಕೀಯ ಷಡ್ಯಂತ್ರಕ್ಕೆ ಬಳಸಿಕೊಳ್ಳುವ ಅಪಾಯವಿದೆ’ ಎಂದು ಪ್ರತಿಪಕ್ಷ
ಗಳು ಆತಂಕ ವ್ಯಕ್ತಪಡಿಸಿವೆ. ಸುಪ್ರೀಂ ಕೋರ್ಟ್ ಬಗ್ಗೆ ಯಾವಾಗಲೂ ಅತಿಹೆಚ್ಚಿನ ಗೌರವವಿದೆ ಎಂಬುದನ್ನೂ ಪಕ್ಷಗಳು ಒತ್ತಿ ಹೇಳಿವೆ.

ಈ ತೀರ್ಪು ನೀಡುವ ಮುನ್ನ, ಹಣಕಾಸು
ಕಾಯ್ದೆ ತಿದ್ದುಪಡಿಗಳ ಸಿಂಧುತ್ವವನ್ನು ಪರಿಶೀಲಿಸುತ್ತಿರುವ ವಿಸ್ತೃತ ಪೀಠದ ತೀರ್ಪು ಬರುವವರೆಗೂ ಸುಪ್ರೀಂಕೋರ್ಟ್ ಕಾಯಬಹುದಿತ್ತು ಎಂದು ಪ್ರತಿಪಕ್ಷಗಳು ಒಟ್ಟಾಗಿ ಅಭಿ
ಪ್ರಾಯಪಟ್ಟಿವೆ. ಒಂದು ವೇಳೆ ತಿದ್ದುಪಡಿಗಳ ವಿರುದ್ಧವಾಗಿ ವಿಸ್ತೃತ ಪೀಠ ತೀರ್ಪು ನೀಡಿದರೆ, ಇಡೀ ಪ್ರಕ್ರಿಯೆ ಹಾಗೂ ಕೋರ್ಟ್‌ನ ಸಮಯ ವ್ಯರ್ಥವಾದಂತಾಗುವುದಿಲ್ಲವೇ ಎಂದು ಪ್ರಶ್ನಿಸಿವೆ.

ADVERTISEMENT

‘ಕಠಿಣ ಸ್ವರೂಪದ ತಿದ್ದುಪಡಿಗಳನ್ನು ಯಥಾವತ್ತಾಗಿ ಪ್ರಕಟಿಸಿರುವ ಕೋರ್ಟ್ ತೀರ್ಪಿನಿಂದ ಬೇಸರವಾಗಿದೆ. ಈ ಕಾಯ್ದೆಯು ಅಲ್ಪಾಯುವಾಗಲಿ ಹಾಗೂ ಸಾಂವಿಧಾನಿಕ ಅಂಶಗಳು ಮೇಲುಗೈ ಸಾಧಿಸಲಿ ಎಂದು ನಾವು ಆಶಿಸುತ್ತೇವೆ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಎನ್‌ಸಿಪಿ, ಎಸ್‌ಪಿ, ಶಿವಸೇನಾ, ಸಿಪಿಐ, ಸಿಪಿಎಂ, ಐಯುಎಂಎಲ್, ಆರ್‌ಎಸ್‌ಪಿ, ಎಂಡಿಎಂಕೆ, ಆರ್‌ಜೆಡಿ ಮತ್ತು ಆರ್‌ಎಲ್‌ಡಿ ಪಕ್ಷಗಳ ಮುಖಂಡರು ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ. ಪ್ರತಿಪಕ್ಷ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್, ರಾಮ್‌ಗೋಪಾಲ್ ಯಾದವ್, ಡೆರೆಕ್ ಒಬ್ರಯಾನ್, ಟಿ.ಆರ್. ಬಾಲು, ಬಿನೊಯ್ ವಿಶ್ವಂ, ಕಪಿಲ್ ಸಿಬಲ್ ಹಾಗೂ ಇತರರೂ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.