ADVERTISEMENT

ಪಿಎಂ ಕೇರ್ಸ್‌ ನಿಧಿ ಮಾಲೀಕತ್ವ: ಕೇಂದ್ರದಿಂದ ದ್ವಂದ್ವ ನಿಲುವು

ಖಾಸಗಿ ಎನ್ನುತ್ತಿದ್ದರೂ ನಿಧಿಯ ವೆಬ್‌ಸೈಟ್‌ಗಾಗಿ ಸರ್ಕಾರಿ ‘ಡೊಮೇನ್‌‘ ಬಳಕೆ!

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 15:58 IST
Last Updated 29 ಡಿಸೆಂಬರ್ 2020, 15:58 IST
ಪಿಎಂ–ಕೇರ್ಸ್‌
ಪಿಎಂ–ಕೇರ್ಸ್‌   

ನವದೆಹಲಿ: ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ವಿವಿಧ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳುವ ಸಂಬಂಧ ಕೇಂದ್ರ ಸರ್ಕಾರ ಸ್ಥಾಪಿಸಿರುವ ಪಿಎಂ–ಕೇರ್ಸ್‌ ನಿಧಿಯ ಮಾಲೀಕತ್ವ ಕುರಿತ ಗೊಂದಲ ಮತ್ತಷ್ಟೂ ಹೆಚ್ಚಿದೆ.

ನಿಧಿಯು ಖಾಸಗಿ ಘಟಕ ಎಂದು ಮೊದಲಿನಿಂದಲೂ ಕೇಂದ್ರ ಸರ್ಕಾರ ಹೇಳುತ್ತಾ ಬಂದಿದೆ. ಆದರೆ, ನಿಧಿಯ ವೆಬ್‌ಸೈಟ್‌ಗಾಗಿ ನ್ಯಾಷನಲ್‌ ಇನ್‌ಫಾರ್ಮ್ಯಾಟಿಕ್ಸ್‌ ಸೆಂಟರ್‌ (ಎನ್‌ಐಸಿ) ‘ಡೊಮೇನ್‌’ (gov.in) ಒದಗಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

‘ಎನ್‌ಐಸಿ ನೀಡುವ ಡೊಮೇನ್‌ ಅನ್ನು ಪಿಎಂ–ಕೇರ್ಸ್‌ ನಿಧಿಯ ವೆಬ್‌ಸೈಟ್‌ಗೆ ಬಳಸಲು ಕೋರಿ ಅರ್ಜಿ ಸಲ್ಲಿಕೆಯಾದ ದಿನಾಂಕ ಹಾಗೂ ಇದಕ್ಕೆ ಅನುಮೋದನೆ ನೀಡಿದ್ದು ಯಾವಾಗ’ ಎಂಬ ವಿವರಗಳನ್ನು ನೀಡುವಂತೆ ಕೋರಿನೌಕಾಪಡೆಯ ನಿವೃತ್ತ ಅಧಿಕಾರಿ ಲೋಕೇಶ್‌ ಬಾತ್ರಾ ಅವರು ಆರ್‌ಟಿಐ ಅಡಿ ಸೆ. 3ರಂದು ಅರ್ಜಿ ಸಲ್ಲಿಸಿದ್ದರು.

ADVERTISEMENT

ಈ ಅರ್ಜಿಗೆ ಡಿ. 8ರಂದು ಎನ್‌ಐಸಿ ಉತ್ತರ ನೀಡಿದ್ದು, ಪಿಎಂ–ಕೇರ್ಸ್‌ ನಿಧಿಗೆ ಡೊಮೇನ್‌ ನೀಡಿರುವ ಕುರಿತ ಮಾಹಿತಿ ಒದಗಿಸಿದೆ.

‘ಪಿಎಂ–ಕೇರ್ಸ್‌ ಟ್ರಸ್ಟ್‌ ಖಾಸಗಿ ಘಟಕ ಎಂದು ಹೇಳಲಾಗುತ್ತಿದೆ. ಈ ಟ್ರಸ್ಟ್‌ನ ಕಚೇರಿ ಪಿಎಂಒ ಆವರಣದಲ್ಲಿ ಇದೆ ಎಂಬ ಏಕೈಕ ಕಾರಣಕ್ಕೆ ಅದನ್ನು ಸರ್ಕಾರಿ ಸಂಸ್ಥೆಗೆ ಸಮಾನವಾದುದು ಎಂದು ಪರಿಗಣಿಸಲು ಹೇಗೆ ಸಾಧ್ಯ’ ಎಂದು ಬಾತ್ರಾ ಪ್ರಶ್ನಿಸಿದರು.

ಪಿಎಂ–ಕೇರ್ಸ್‌ ನಿಧಿಯ ವೆಬ್‌ಸೈಟ್‌ಗಾಗಿ ಡೊಮೇನ್‌ ಬಳಸಲು ಅನುಮೋದನೆ ನೀಡುವಂತೆ ಕೋರಿ ಪಿಎಂಒ ಕಳೆದ ಮಾರ್ಚ್‌ 27ರಂದು ಎನ್‌ಐಸಿಗೆ ಪತ್ರ ಬರೆದಿದೆ. ಈ ಡೊಮೇನ್‌ (gov.in) ಬಳಕೆಗೆ ಅನುಮತಿ ನೀಡುವಂತೆ ಕೋರಿ ವಿವಿಧ ಇಲಾಖೆಗಳು, ಏಜೆನ್ಸಿಗಳು ಅರ್ಜಿ ಸಲ್ಲಿಸಿ ಹಲವು ದಿನಗಳು ಕಳೆದಿದ್ದರೂ, ಎನ್‌ಐಸಿ ತನ್ನ ತೀರ್ಮಾನವನ್ನು ಕಾಯ್ದಿರಿಸಿತ್ತು. ಅಚ್ಚರಿ ಎಂದರೆ, ಪಿಎಂ–ಕೇರ್ಸ್‌ ನಿಧಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ದಿನದಂದೇ ಅನುಮೋದನೆ ನೀಡಿರುವುದು ಎನ್‌ಐಸಿ ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

‘ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಇನ್‌ಫಾರ್ಮೇಷನ್‌ ಟೆಕ್ನಾಲಜಿ ಸಚಿವಾಲಯದ ಇಂಟರ್‌ನೆಟ್‌ ಗವರ್ನೆನ್ಸ್‌ ವಿಭಾಗದ ನಿಯಮಾವಳಿಗಳ ಅನುಸಾರ ಪಿಎಂಒಗೆ ಈ ಡೊಮೇನ್‌ ನೀಡಲಾಗಿದೆ’ ಎಂದೂ ಎನ್‌ಐಸಿ ಉತ್ತರಿಸಿದೆ.

ಸಚಿವಾಲಯದ ನಿಯಮಾವಳಿಗಳ ಪ್ರಕಾರ, ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಕಚೇರಿಗಳಿಗೆ ಮಾತ್ರ ಈ ಡೊಮೇನ್‌ನಲ್ಲಿ ವೆಬ್‌ಸೈಟ್‌ ನೋಂದಣಿ ಮಾಡಿಕೊಳ್ಳಲು ಅವಕಾಶ ಇದೆ.

ಆದರೆ, ಈ ಡೊಮೇನ್‌ ಬಳಕೆ ಕೋರಿ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು. ಇಂಥ ಸಂದರ್ಭಗಳಲ್ಲಿ ಸಚಿವಾಲಯದ ಕಾರ್ಯದರ್ಶಿ ಅಂತಿಮ ನಿರ್ಧಾರ ಕೈಗೊಳ್ಳಲು ಈ ನಿಯಮಗಳಡಿ ಅವಕಾಶ ಇದೆ.

ಈ ನಿಧಿ ಸ್ಥಾಪನೆಯಾದಾಗಿನಿಂದಲೂ ವಿರೋಧ ಪಕ್ಷಗಳು, ಹೋರಾಟಗಾರರಿಂದ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ಈ ನಿಧಿ ನಿರ್ವಹಣೆ ವಿಷಯದಲ್ಲಿ ಪಾರದರ್ಶಕತೆ ಕೊರತೆ ಇದೆ ಎಂಬ ಆರೋಪಗಳು ಈಗಲೂ ಕೇಳಿ ಬರುತ್ತಿವೆ.

ಅದರಲ್ಲೂ, ಈ ನಿಧಿ ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂದು ಸರ್ಕಾರ ಹೇಳುತ್ತಲೇ ಇದೆ. ನಿಧಿಯನ್ನು ನಿರ್ವಹಿಸುವ ಟ್ರಸ್ಟ್‌ಗೆ ಆದಾಯ ತೆರಿಗೆಯಿಂದ ವಿನಾಯಿತಿಯನ್ನೂ ನೀಡಲಾಗಿದೆ. ಅಲ್ಲದೇ, ಆರ್‌ಟಿಐ ವ್ಯಾಪ್ತಿಗೆ ಈ ನಿಧಿ ಬರುವುದಿಲ್ಲ ಎಂಬ ಸರ್ಕಾರದ ನಿಲುವು ಸಹ ಟೀಕೆಗೆ ಒಳಗಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.