ಶ್ರೀನಗರ: ಪಹಲ್ಗಾಮ್ ದಾಳಿಯ ನಂತರ ಅನಂತ್‌ನಾಗ್ ಜಿಲ್ಲೆಯಲ್ಲಿ ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ಬಳಸುವುದನ್ನು ನಿಷೇಧಿಸಿರುವುದರಿಂದ ನಾಗರಿಕರರು ಅವುಗಳನ್ನು ಬಳಸದೇ ಇರುವಂತೆ ಪೊಲೀಸರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಘಟನೆಯ ನಂತರ ಕೇಂದ್ರ ಸರ್ಕಾರವು ಕೆಲವು ವೆಬ್‌ಸೈಟ್‌ಗಳನ್ನು ನಿಷೇಧಿಸಿದ್ದು, ದೊಡ್ಡ ಪ್ರಮಾಣದ ಜನರು ವಿಪಿಎನ್ ಮೂಲಕ ಅದರ ಮಾಹಿತಿಯನ್ನು ಪಡೆಯುತ್ತಿದ್ದಾರೆ ಎನ್ನುವ ಪೊಲೀಸ್ ಮಾಹಿತಿಯ ಆಧಾರದಲ್ಲಿ ಅನಂತ್‌ನಾಗ್ ಜಿಲ್ಲಾ ನ್ಯಾಯಲಯವು ಮೇ.7ರಂದು ಎಲ್ಲಾ ರೀತಿಯ ವಿಪಿಎನ್ ಬಳಕೆಯನ್ನು ಎರಡು ತಿಂಗಳ ಕಾಲ ಸ್ಥಗಿತಗೊಳಿಸಿ ಆದೇಶ ನೀಡಿತ್ತು.
ಆದರೂ ಕೂಡ ಜನರು ವಿಪಿಎನ್ ಬಳಕೆ ಮುಂದುವರೆಸಿರುವುದರಿಂದ ಇದೀಗ ಪೊಲೀಸರೇ ಮನವಿ ಮಾಡಿದ್ದಾರೆ.
ಎನ್‌ಕ್ರಿಪ್ಟ್ ಮಾಡಿದ ದತ್ತಾಂಶಗಳನ್ನು ರವಾನಿಸಲು ಹಾಗೂ ಐಪಿ ವಿಳಾಸ ಮರೆಮಾಚಲು ವಿಪಿಎನ್ ಬಳಕೆ ಮಾಡಲಾಗುತ್ತಿದೆ. ಕೆಲವು ನಿಷೇಧಿತ ವೆಬ್‌ಸೈಟ್ ಬಳಸಲು ಕೂಡ ಇದನ್ನು ಉಪಯೋಗಿಸುತ್ತಿದ್ದಾರೆ. ನ್ಯಾಯಲಯದ ಆದೇಶದ ನಂತರವೂ ವಿಪಿಎನ್ ಬಳಕೆ ಮುಂದುವರೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ವಿಪಿಎನ್ ಮೂಲಕ ಅಶಾಂತಿಯನ್ನು ಪ್ರಚೋದಿಸುವುದು ಹಾಗೂ ಪ್ರಚೋದನಕಾರಿ ವಿಷಯಗಳನ್ನು ಪ್ರಸಾರ ಮಾಡುವುದು ಸೇರಿದಂತೆ ಕಾನೂನುಬಾಹಿರ ಮತ್ತು ದೇಶ ವಿರೋಧಿ ಚಟುವಟಿಕೆಗಳನ್ನು ಮಾಡಲಾಗುತ್ತಿದೆ. ವಿಪಿಎನ್ ಅನ್ನು ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ದತ್ತಾಂಶ ಸುರಕ್ಷಿತೆ ಹಾಗೂ ಯಾವುದೇ ಸೈಬರ್ ದಾಳಿಯನ್ನು ತಡೆಗಟ್ಟಲು ವಿಪಿಎನ್ ಬಳಕೆಯನ್ನು ತಪ್ಪಿಸಬೇಕಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.