ADVERTISEMENT

ಕೋಲ್ಕತ್ತ: ಐಎಸ್‌ಎಫ್ ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್, ಹಲವರು ಗಾಯ

ಪೊಲೀಸರತ್ತ ಕಲ್ಲುತೂರಾಟ, ಸ್ಥಳದಲ್ಲಿ ಸೇನಾ ತುಕಡಿ ನಿಯೋಜನೆ

ಪಿಟಿಐ
Published 21 ಜನವರಿ 2023, 20:29 IST
Last Updated 21 ಜನವರಿ 2023, 20:29 IST
ಕೋಲ್ಕತ್ತದಲ್ಲಿ ಶನಿವಾರ ಐಎಸ್‌ಎಫ್ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು, ಅಶ್ರುವಾಯು ಪ್ರಯೋಗಿಸಿ ಪ್ರತಿಭಟನಕಾರರನ್ನು ಚದುರಿಸಿದರು –ಪಿಟಿಐ ಚಿತ್ರ 
ಕೋಲ್ಕತ್ತದಲ್ಲಿ ಶನಿವಾರ ಐಎಸ್‌ಎಫ್ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು, ಅಶ್ರುವಾಯು ಪ್ರಯೋಗಿಸಿ ಪ್ರತಿಭಟನಕಾರರನ್ನು ಚದುರಿಸಿದರು –ಪಿಟಿಐ ಚಿತ್ರ    

ಕೋಲ್ಕತ್ತ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಕಾರ್ಯಕರ್ತರು 24 ದಕ್ಷಿಣ ಪರಗಣ ಜಿಲ್ಲೆಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ, ಇಂಡಿಯನ್ ಸೆಕ್ಯುಲರ್ ಫ್ರಂಟ್‌ನ (ಐಎಸ್‌ಎಫ್) ಕಾರ್ಯಕರ್ತರು ಕೋಲ್ಕತ್ತದ ಎಸ್‌ಪ್ಲಾನೇಡ್ ಪ್ರದೇಶದಲ್ಲಿ ಶನಿವಾರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಘರ್ಷಣೆ ನಡೆದು, ಹಲವರು ಗಾಯಗೊಂಡಿದ್ದಾರೆ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಐಎಸ್‌ಎಫ್‌ನ ಏಕೈಕ ಶಾಸಕ ನೌಷಾದ್ ಸಿದ್ಧಿಕಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಪ್ರತಿಭಟನಕಾರರು ಗಾಯಗೊಂಡಿದ್ದಾರೆ.

‘ಪ್ರತಿಭಟನಕಾರರು ನಗರದ ಮಧ್ಯಭಾಗದ ಪ್ರದೇಶವನ್ನು ಬಂದ್ ಮಾಡಿದ್ದರು. ಜವಾಹರಲಾಲ್ ನೆಹರೂ ರಸ್ತೆಯನ್ನು ತೆರವುಗೊಳಿಸುವಂತೆ ಪೊಲೀಸರು ಪ್ರತಿಭಟನಕಾರರಿಗೆ ಮನವಿ ಮಾಡಿದರು. ಆದರೆ, ಪ್ರತಿಭಟನಕಾರರು ರಸ್ತೆ ತೆರವುಗೊಳಿಸಲು ನಿರಾಕರಿಸಿದರಲ್ಲದೇ, ಐಎಸ್‌ಎಫ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು. ‌ಈ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿ, ಅಶ್ರುವಾಯು ಸಿಡಿಸಿದರು. ಸುಮಾರು 500ರಷ್ಟು ಸಂಖ್ಯೆಯಲ್ಲಿದ್ದ ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದಾಗ, ಹಲವಾರು ಪೊಲೀಸರು ಗಾಯಗೊಂಡರು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಸುಮಾರು ಒಂದು ಗಂಟೆಯ ಬಳಿಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಪೊಲೀಸರು ರಸ್ತೆ ತೆರವು ಮಾಡಿಸುವಲ್ಲಿ ಯಶಸ್ವಿಯಾದರು. ಆದರೆ, ಪ್ರತಿಭಟನಕಾರರು ಕೆಲಕಾಲ ಪೊಲೀಸರತ್ತ ಕಲ್ಲು ತೂರಿದರು. ಪೊಲೀಸರು ಬೆನ್ನಟ್ಟಿದ್ದಾಗ ತಪ್ಪಿಸಿಕೊಂಡು ಓಡಿಹೋದರು. ಸ್ಥಳದಲ್ಲಿ ಸೇನಾ ತುಕಡಿಗಳನ್ನು ನಿಯೋಜಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.