ಎನ್‌ಕೌಂಟರ್ ನಡೆದ ಜಾಗದಲ್ಲಿ ಪೊಲೀಸರು
ಹೈದರಾಬಾದ್: ನಿಜಾಮಾಬಾದ್ ಪೊಲೀಸ್ ಕಮಿಷನರೇಟ್‌ನ ಕಾನ್‌ಸ್ಟೆಬಲ್ ಒಬ್ಬರಬನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಕಳ್ಳತನದ ಆರೋಪಿ ಶೇಖ್ ರಿಯಾಜ್ (24) ಎಂಬುವನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.
ನಿಜಾಮಾಬಾದ್‌ನ ಸಾರಂಗಪುರ ಬಳಿ ಇಂದು ಬೆಳಿಗ್ಗೆ ಎನ್‌ಕೌಂಟರ್ ನಡೆದಿದೆ. ಎನ್‌ಕೌಂಟರ್ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ರಿಯಾಜ್‌ನನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಆತ ಬದುಕುಳಿಯಲಿಲ್ಲ ಎಂದು ಹೈದರಾಬಾದ್‌ನಲ್ಲಿರುವ ಡಿಜಿಪಿ ಕಚೇರಿ ತಿಳಿಸಿದೆ.
ಸಾರಂಗಪುರ ಬಳಿ ರಿಯಾಜ್ ಅವಿತಿರುವ ಮಾಹಿತಿ ಆಧರಿಸಿ ಪೊಲೀಸರು ಬಂಧಿಸಲು ಹೋದ ವೇಳೆ ಪೊಲೀಸರ ಬಳಿಯ ಪಿಸ್ತೂಲ್ ಕಸಿದು ಗುಂಡು ಹಾರಿಸಲು ಪ್ರಯತ್ನಿಸಿದ್ದ. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾಗ ಆತ ಸಾವನ್ನಪ್ಪಿದ್ದಾನೆ.
ಘಟನೆ ವೇಳೆ ಕೆಲ ಪೊಲೀಸರು ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಾಹನ ಕಳ್ಳತನದ ಪ್ರಕರಣದಲ್ಲಿ ಬಂಧಿತನಾಗಿದ್ದ ಶೇಖ್ ರಿಯಾಜ್ ಎಂಬಾತನನ್ನು ಕಳೆದ ಶುಕ್ರವಾರ ನಿಜಾಮಾಬಾದ್ ಪೊಲೀಸ್ ಠಾಣೆಗೆ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದ ಕಾನ್‌ಸ್ಟೆಬಲ್ ಇ. ಪ್ರಮೋದ್ ಎನ್ನುವರ (42) ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಕೊಲೆ ಬಳಿಕ ಆರೋಪಿ ಪರಾರಿಯಾಗಿದ್ದ.
ಆರೋಪಿಯು ಚಾಕುವನ್ನು ಶೂ ಒಳಗೆ ಇರಿಸಿಕೊಂಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ಪ್ರಮೋದ್ ಅಸುನೀಗಿದ್ದರು. ಕಾನ್‌ಸ್ಟೆಬಲ್ ಬೈಕ್ ಹಿಂಬಾಲಿಸುತ್ತಿದ್ದ ಸಬ್ ಇನ್‌ಸ್ಪೆಕ್ಟರ್ ಮೇಲೆಯೂ ಆರೋಪಿಯು ದಾಳಿ ನಡೆಸಿದ್ದು, ಅವರ ಬೆರಳುಗಳಿಗೆ ಗಾಯಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.