ADVERTISEMENT

ಗುಜ್ಜರ್‌ ಕುಟುಂಬದ ಮೇಲೆ ದಾಳಿ: ತನಿಖೆ ಪ್ರಾರಂಭಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 6:46 IST
Last Updated 22 ಮಾರ್ಚ್ 2021, 6:46 IST
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ   

ಜಮ್ಮು: ‘ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಗುಜ್ಜರ್ ಸಮುದಾಯಕ್ಕೆ ಸೇರಿದ ಕುಟುಂಬದವರ ಮೇಲೆ ಹಲ್ಲೆ ನಡೆದಿದ್ದು ಈ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ’ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.

‘ಹಳ್ಳಿಯೊಂದರಲ್ಲಿ ಅಪರಿಚಿತ ವ್ಯಕ್ತಿಗಳು ಗುಜ್ಜರ್‌ ಸಮುದಾಯದ ವ್ಯಕ್ತಿಯೊಬ್ಬರ ಕಿರಿಯ ಮಗಳಿಗೆ ಕಿರುಕುಳ ನೀಡಿದ್ದಾರೆ. ಇದನ್ನು ಬಾಲಕಿಯ ತಂದೆ ವಿರೋಧಿಸಿದ್ದಾರೆ. ಇದರಿಂದ ಕೋಪಗೊಂಡ ವ್ಯಕ್ತಿಗಳು ಆತನ ಕುಟುಂಬದವರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಬಾಲಕಿಯ ತಂದೆಗೆ ಗಾಯಗಳಾಗಿವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ(ಜಿಎಂಸಿ) ಅವರನ್ನು ದಾಖಲಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು.

ADVERTISEMENT

ಈ ಘಟನೆಯನ್ನು ಖಂಡಿಸಿರುವ ಪೀಪಲ್ಸ್‌ ಡೆಮಾಕ್ರಟಿಕ್ ಪಕ್ಷದ(ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಜಮ್ಮುವಿನ ಐಜಿಪಿ ಮುಖೇಶ್‌ ಸಿಂಗ್‌ ಅವರಿಗೆ ಮನವಿ ಮಾಡಿದ್ದಾರೆ.

‘ಶನಿವಾರ ಸಾಂಬಾ ಜಿಲ್ಲೆಯಲ್ಲಿ ಗುಜ್ಜರ್‌ ಕುಟುಂಬದ ಮೇಲೆ ಕ್ರೂರವಾಗಿ ದಾಳಿ ನಡೆಸಲಾಗಿದೆ. ಕಿಡಿಕೇಡಿಗಳು ಅವರ ಮಗಳನ್ನು ಅಪಹರಿಸಲು ಪ್ರಯತ್ನಿಸಿದ್ದಾರೆ. ಇದನ್ನು ತಡೆದ ಕುಟುಂಬದವರನ್ನು ಆರೋಪಿಗಳು ಥಳಿಸಿದ್ದಾರೆ. ಮುಖೇಶ್‌ ಸಿಂಗ್‌ ಅವರು ಈ ಬಗ್ಗೆ ತಕ್ಷಣವೇ ಕ್ರಮಕೈಗೊಳ್ಳಬೇಕು’ ಎಂದು ಮುಫ್ತಿ ಅವರು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಐಜಿಪಿ ಅವರು,‘ ಪೊಲೀಸರು ಈಗಾಗಲೇ ಪ್ರಕರಣವನ್ನು ಕೈಗೆತ್ತಿಗೊಂಡಿದ್ದಾರೆ. ಈ ಬಗ್ಗೆ ಎಫ್‌ಐಆರ್‌ ಅನ್ನು ಕೂಡ ದಾಖಲಿಸಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.