ADVERTISEMENT

ಪಂಜಾಬ್: ಬ್ಯಾರಿಕೇಡ್ ಮುರಿದು ರಾಜಭವನಕ್ಕೆ ತೆರಳಲು ರೈತರ ಯತ್ನ: ಜಲಫಿರಂಗಿ ಪ್ರಯೋಗ

ಪಿಟಿಐ
Published 26 ಜೂನ್ 2021, 12:05 IST
Last Updated 26 ಜೂನ್ 2021, 12:05 IST
ಪ್ರಾತಿನಿಧಿಕ ಚಿತ್ರ: ಎಎಫ್‌ಪಿ
ಪ್ರಾತಿನಿಧಿಕ ಚಿತ್ರ: ಎಎಫ್‌ಪಿ   

ಚಂಡೀಗಡ: ಪಂಜಾಬ್ ರಾಜ್ಯಪಾಲರ ಮನೆಯತ್ತ ಮೆರವಣಿಗೆ ನಡೆಸಲು ಪ್ರಯತ್ನಿಸಿರುವ ರೈತರು ಚಂಡೀಗಡ- ಮೊಹಾಲಿ ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಭೇದಿಸಿ ಒಳ ನುಗ್ಗಿದ್ದು, ರೈತರನ್ನು ಚದುರಿಸಲು ಪೊಲೀಸರು ಶನಿವಾರ ಜಲಫಿರಂಗಿ ಪ್ರಯೋಗಿಸಿದ್ದಾರೆ.

ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧದ ಏಳು ತಿಂಗಳ ಆಂದೋಲನ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ರೈತರು ಇಲ್ಲಿನ ರಾಜ್ಯಪಾಲರ ಮನೆಗೆ ಮೆರವಣಿಗೆ ನಡೆಸಿ ಜ್ಞಾಪಕ ಪತ್ರವನ್ನು ಸಲ್ಲಿಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಚಂಡೀಗಡದಲ್ಲಿ ಭಾರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್‌ನ ವಿವಿಧೆಡೆಯಿಂದ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ರೈತರು ಪಂಜಾಬ್ ರಾಜಭವನದತ್ತ ಸಾಗುವ ಮುನ್ನ ಮೊಹಾಲಿಯ ಅಂಬ್ ಸಾಹಿಬ್ ಗುರುದ್ವಾರದಲ್ಲಿ ಒಟ್ಟುಗೂಡಿದರು.

ADVERTISEMENT

ಅದೇ ರೀತಿ ಹರಿಯಾಣದಲ್ಲಿ ರಾಜ್ಯದ ಹಲವಾರು ಭಾಗಗಳಿಂದ ರೈತರು ಪಂಚಕುಲಾದ ನಾದಾ ಸಾಹಿಬ್ ಗುರುದ್ವಾರದಲ್ಲಿ ಜಮಾಯಿಸಿ ರಾಜಭವನದತ್ತ ಹೊರಟಿದ್ದರು.

ರೈತರ ಪ್ರತಿಭಟನಾ ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹರಿಯಾಣ ಪೊಲೀಸರು ಚಂಡೀಗಡ– ಪಂಚಕುಲ ಗಡಿಯಲ್ಲಿ ಭದ್ರತಾ ವ್ಯವಸ್ಥೆ ಮಾಡಿದ್ದಾರೆ.

ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಕಾಯ್ದೆ, 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020ರ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಹೊಸ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿ ರೈತರು ಕಳೆದ ನವೆಂಬರ್‌ನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.