ADVERTISEMENT

ಆಸ್ಪತ್ರೆಗಳಲ್ಲಿ ಸುಲಿಗೆ | ನೀತಿ ರೂಪಿಸುವ ಹೊಣೆ ರಾಜ್ಯಗಳದ್ದು: ಸುಪ್ರೀಂ ಕೋರ್ಟ್

ಪಿಟಿಐ
Published 4 ಮಾರ್ಚ್ 2025, 16:12 IST
Last Updated 4 ಮಾರ್ಚ್ 2025, 16:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳು ಮತ್ತು ಅವರ ಆರೈಕೆಗಾಗಿ ಜೊತೆಯಲ್ಲಿ ಇರುವವರು ಸುಲಿಗೆಗೆ ಗುರಿಯಾಗುವುದನ್ನು ತಡೆಯಲು ಸೂಕ್ತವಾದ ನೀತಿ ರೂಪಿಸುವ ಹೊಣೆಯು ರಾಜ್ಯ ಸರ್ಕಾರಗಳದ್ದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಔಷಧ ಮಳಿಗೆಗಳಲ್ಲಿ ಹೆಚ್ಚಿನ ಬೆಲೆಗೆ ಔಷಧ ಮತ್ತು ವೈದ್ಯಕೀಯ ಉಪಕರಣ ಖರೀದಿಸಬೇಕಾದ ಸ್ಥಿತಿಯನ್ನು ರೋಗಿಗಳು, ಅವರನ್ನು ಆರೈಕೆ ಮಾಡುವವರು ಎದುರಿಸುತ್ತಿದ್ದಾರೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರಲ್ಲಿ ದೂರಲಾಗಿತ್ತು.

ಕಡ್ಡಾಯವಾಗಿ ಪಾಲಿಸಬೇಕಾದ ನಿರ್ದೇಶನಗಳನ್ನು ತಾನು ನೀಡಿದರೆ ಖಾಸಗಿ ಆಸ್ಪತ್ರೆಗಳ ಕಾರ್ಯನಿರ್ವಹಣೆಗೆ ಅಡ್ಡಿ ಉಂಟಾಗಬಹುದು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.

ADVERTISEMENT

ಕಾನೂನು ವಿದ್ಯಾರ್ಥಿ ಸಿದ್ಧಾರ್ಥ ದಾಲ್ಮಿಯಾ ಮತ್ತು ಅವರ ತಂದೆ, ವಕೀಲ ವಿಜಯಪಾಲ್ ದಾಲ್ಮಿಯಾ ಅವರು ಈ ಅರ್ಜಿ ಸಲ್ಲಿಸಿದ್ದರು. ‘ಈ ಅರ್ಜಿಯಲ್ಲಿನ ವಿಷಯವನ್ನು ಪರಿಗಣಿಸಿ, ಸೂಕ್ತವೆನ್ನಿಸುವ ನೀತಿ ನಿರ್ಧಾರ ಕೈಗೊಳ್ಳಬೇಕು ಎಂದು ನಾವು ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸುತ್ತಿದ್ದೇವೆ’ ಎಂದು ಪೀಠ ಹೇಳಿದೆ. ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ.

ನೀತಿ ನಿರೂಪಕರು ಈ ವಿಚಾರದಲ್ಲಿ ಸೂಕ್ತ ಮಾರ್ಗಸೂಚಿ ರೂಪಿಸಬೇಕು. ರೋಗಿಗಳು ಹಾಗೂ ಅವರ ಆರೈಕೆಗೆ ಇರುವವರು ಸುಲಿಗೆಗೆ ತುತ್ತಾಗದಂತೆ ನೋಡಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ಖಾಸಗಿ ಸಂಸ್ಥೆಗಳು ಆರೋಗ್ಯಸೇವಾ ಕ್ಷೇತ್ರವನ್ನು ಪ್ರವೇಶಿಸುವುದರ ಮೇಲೆ ಅತಾರ್ಕಿಕವಾದ ನಿರ್ಬಂಧಗಳು ಕೂಡ ಇರಬಾರದು ಎಂದು ಪೀಠವು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.