
ನವದೆಹಲಿ: ಭಾರತವು ಪೋಲಿಯೊ ಮುಕ್ತ ದೇಶವಾಗಿ ಮಂಗಳವಾರಕ್ಕೆ (ಜ.13) 15 ವರ್ಷ ಪೂರ್ಣಗೊಂಡಿದೆ. ಇದು ದೇಶದ ಆರೋಗ್ಯ ಕ್ಷೇತ್ರದಲ್ಲಿನ ಮಹತ್ವದ ಸಾಧನೆಯಾಗಿದೆ.
ಕೆಲವು ದಶಕಗಳ ಹಿಂದೆ ಜಗತ್ತಿನಲ್ಲೇ ಅತಿ ಹೆಚ್ಚು ಪೋಲಿಯೊ ಪೀಡಿತರಿದ್ದ ದೇಶಗಳಲ್ಲಿ ಭಾರತವು ಕೂಡ ಒಂದಾಗಿತ್ತು. ರಾಜಕೀಯ ಇಚ್ಚಾಶಕ್ತಿ ಹಾಗೂ ಸಮುದಾಯದ ಸಹಕಾರದಿಂದ ಕಳೆದ 15 ವರ್ಷಗಳಿಂದ ದೇಶದಲ್ಲಿ ಯಾವುದೇ ಪೋಲಿಯೊ ಪ್ರಕರಣಗಳು ದಾಖಲಾಗಿಲ್ಲ.
2009ರ ವೇಳೆಗೆ ದೇಶದಲ್ಲಿ 741 ಪೋಲಿಯೊ ಪ್ರಕರಣಗಳು ಇದ್ದವು. ಇದು ಆ ಸಮಯದಲ್ಲಿ ಜಗತ್ತಿನ ಪೋಲಿಯೊ ಪೀಡಿತರ ಶೇ.60 ರಷ್ಟಾಗಿತ್ತು. ಆದರೆ, ನಂತರದ ಎರಡು ವರ್ಷಗಳಲ್ಲಿ ದೇಶವು ಇದರಿಂದ ಮುಕ್ತವಾಗಿತ್ತು. 2011ರಲ್ಲಿ ದೇಶದ ಕೊನೆಯ ಪೋಲಿಯೊ ಪ್ರಕರಣ ದಾಖಲಾಗಿತ್ತು.
ಭಾರತವನ್ನು ಪೋಲಿಯೊ ಮುಕ್ತ ಮಾಡುವುದು ಅಸಾಧ್ಯ ಎಂದು ಬಹುತೇಕರು ಭಾವಿಸಿದ್ದರು. ಆದರೆ, ದೇಶದಲ್ಲಿ ಕೊನೆಯ ಪ್ರಕರಣ ದಾಖಲಾಗಿ 15 ವರ್ಷವಾಗಿದೆ. ಇದರ ಹಿಂದೆ ಅನೇಕರ ಪರಿಶ್ರಮವಿದೆ ಎಂದು ಅಂತರರಾಷ್ಟ್ರೀಯ ಪೀಡಿಯಾಟ್ರಿಕ್ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ 2025ರ ಗೋಲ್‌ಕೀಪರ್ ಚಾಂಪಿಯನ್ ಪ್ರಶಸ್ತಿ ಪುರಸ್ಕೃತ ಡಾ. ನವೀನ್ ಠಾಕರ್ ತಿಳಿಸಿದ್ದಾರೆ.
ಪೋಲಿಯೊ ಮುಕ್ತ ದೇಶವನ್ನಾಗಿಸುವ ಉದ್ದೇಶದಿಂದ ವಾರ್ಷಿಕ 17.2 ಕೋಟಿ ಮಕ್ಕಳಿಗೆ 100 ಕೋಟಿಗೂ ಅಧಿಕ ಲಸಿಕೆಯನ್ನು ಹಾಕಲಾಗುತ್ತಿದೆ. ಅತಿ ಜನಸಂಖ್ಯೆ, ಬಡತನ ಹಾಗೂ ಕೆಲವು ಸಮುದಾಯಗಳ ವಿರೋಧದ ನಡುವೆಯೂ ಈ ಸಾಧನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ದೇಶವು ಪೋಲಿಯೊ ಮುಕ್ತವಾಗಿರುವುದು ನಮ್ಮಲ್ಲಿನ ಆರೋಗ್ಯ ವ್ಯವಸ್ಥೆ ಹಾಗೂ ಅತ್ಯುತ್ತಮ ಪ್ರಚಾರ ತಂತ್ರಕ್ಕೆ ಮಾದರಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇಂದಿಗೂ ದೇಶದ ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಯು–ವಿನ್, ಇ–ವಿನ್ ಹಾಗೂ ಸೇಫ್ ವ್ಯಾಕ್ ತರಹದ ತಂತ್ರಜ್ಞಾನವನ್ನು ಕೂಡ ಪೋಲಿಯೊವನ್ನು ತಡೆಗಟ್ಟಲು ಬಳಸಿಕೊಳ್ಳಲಾಗುತ್ತಿದೆ. ಜನರ ಸಹಕಾರ ಹಾಗೂ ಆಧುನಿಕ ತಂತ್ರಜ್ಞಾನ ಮೂಲಕ ಪೋಲಿಯೊ ಮುಕ್ತ ದೇಶದ ಸ್ಥಾನಮಾನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದೆ.
ಭಾರತವು ಜಗತ್ತಿನ ಇತರ ದೇಶಗಳಿಗೆ ತಂತ್ರಜ್ಞಾನ ಹಾಗೂ ಲಸಿಕೆಯನ್ನು ಸರಬರಾಜು ಮಾಡುವ ಮೂಲಕ ಜಗತ್ತನ್ನು ಪೋಲಿಯೊ ಮುಕ್ತ ಮಾಡುವಲ್ಲಿ ಸಹಕರಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.