ಲೋಕಸಭೆ
– ಪಿಟಿಐ
ನವದೆಹಲಿ: ದೇಶದಲ್ಲಿ ಪ್ರಸ್ತುತ ಶೇ 21 ರಷ್ಟು ಸಂಸದರು, ಶಾಸಕರು ವಂಶಪಾರಂಪರ್ಯ ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿಯಲ್ಲಿ ಈ ಅಂಶವನ್ನು ಬೆಳಕಿಗೆ ತಂದಿದೆ.
ಪ್ರಸ್ತುತ ದೇಶದಾದ್ಯಂತ ಸಂಸದರು, ಶಾಸಕರು, ವಿಧಾನ ಪರಿಷತ್‌ಗಳ ಸದಸ್ಯರಾಗಿರುವವರು ಐದರಲ್ಲಿ ಒಬ್ಬರು ಕುಟುಂಬ ರಾಜಕಾರಣದ ಹಿನ್ನೆಲೆಯನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ.
ಸದ್ಯ ದೇಶದಾದ್ಯಂತ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರ ಸಂಖ್ಯೆ 5,204. ಪ್ರಸ್ತುತ ವಂಶಪಾರಂಪರೆಯ ಹಿನ್ನೆಲೆಯನ್ನು ಹೊಂದಿರುವವರ ಪ್ರಮಾಣ ಲೋಕಸಭೆಯಲ್ಲಿ ಹೆಚ್ಚಿದೆ ಇದೆ ಎಂದು ವರದಿ ಹೇಳಿದೆ.
ಲೋಕಸಭೆಯಲ್ಲಿ ಇದರ ಪ್ರಮಾಣ ಶೇ 31. ಅಂದರೆ ಲೋಕಸಭೆಯಲ್ಲಿ ನೂರಕ್ಕೆ 31 ಸಂಸದರು ಕುಟುಂಬ ರಾಜಕಾರಣದ ಕುಡಿಗಳು. ರಾಜ್ಯಸಭೆಯಲ್ಲಿ ಶೇ 21.
ರಾಜ್ಯಗಳ ವಿಧಾನಸಭೆ, ವಿಧಾನ ಪರಿಷತ್‌ಗಳಲ್ಲಿ ಒಟ್ಟಾರೆ ವಂಶಾಡಳಿತದ ಪ್ರಮಾಣ ಶೇ 22 ಇದೆ ಎಂದು ವರದಿ ಹೇಳಿದೆ.
ವಿಶೇಷ ಎಂದರೆ ಕುಟುಂಬ ರಾಜಕಾರಣದ ಹಿನ್ನೆಲೆ ಹೊಂದಿರುವ ಮಹಿಳಾ ಸಂಸದರ, ಶಾಸಕರ ಪ್ರಮಾಣ ಶೇ 47 ರಷ್ಟಿದೆ. ಪುರುಷರ ಪ್ರಮಾಣ ಶೇ 18 ರಷ್ಟಿದೆ. ಇವರ ಪ್ರಮಾಣ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು, ಪಶ್ಚಿಮ ಬಂಗಾಳದಲ್ಲಿ ಕಡಿಮೆ ಇದೆ.
ಕರ್ನಾಟಕ ನಾಲ್ಕನೇ ಸ್ಥಾನದಲ್ಲಿ!
ಕುಟುಂಬ ರಾಜಕಾರಣದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿ 94 ಜನ ‘ನೆಪೊ ಕಿಡ್’ಗಳಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 141, ನಂತರ ಮಹಾರಾಷ್ಟ್ರ 129, ಬಿಹಾರ 96. ಅಸ್ಸಾಂನಲ್ಲಿ ಅತ್ಯಂತ ಕಡಿಮೆ ಇದೆ. ಅಲ್ಲಿ ಇವರ ಪ್ರಮಾಣ ಕೇವಲ 9.
ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ವಂಶಾಡಳಿತ ಬಲವಾಗಿ ಬೇರೂರಿದೆ ಎಂದು ಈ ವರದಿ ಹೇಳುತ್ತದೆ.
ಪ್ರಾದೇಶಿಕ ಪಕ್ಷಗಳಲ್ಲಿ ಶರದ್ ಪವಾರ್ ಅವರ ಎನ್‌ಸಿಪಿಯಲ್ಲಿ ಅತಿ ಹೆಚ್ಚು ಕುಟುಂಬ ರಾಜಕಾರಣದ ಕುಡಿಗಳು ನೆಲೆ ಕಂಡುಕೊಂಡಿದ್ದಾರೆ. ಅಲ್ಲಿ ಅವರ ಪ್ರಮಾಣ ಗರಿಷ್ಠ ಶೇ 42, ವೈಎಸ್‌ಆರ್‌ಸಿಪಿ ಶೇ 38, ಟಿಡಿಪಿ ಶೇ 36, ಟಿಎಂಸಿ ಶೇ 10 ಹಾಗೂ ಎಐಎಡಿಎಂಕೆ ಶೇ 4.
ಕುಟುಂಬ ರಾಜಕಾರಣಕ್ಕೆ ಅತೀ ಹೆಚ್ಚು ಆಶ್ರಯ ಕೊಟ್ಟಿರುವ ರಾಷ್ಟ್ರೀಯ ಪಕ್ಷಗಳಲ್ಲಿ ಕಾಂಗ್ರೆಸ್ ಗುರುತಿಸಿಕೊಂಡಿದೆ ಎಂದು ವರದಿ ಹೇಳಿದೆ. ಅದರ ಪ್ರಮಾಣ ಶೇ 32. ಬಿಜೆಪಿದು ಶೇ 18. ಸಿಪಿಐಎಂನಲ್ಲಿ ಶೇ 8.
ಜಾತಿ ಬಲ, ಹಣ ಬಲ ಇತ್ಯಾದಿ ಪ್ರಭಾವಿ ಕಾರಣಗಳಿಂದ ಪಕ್ಷಗಳು ವಂಶಾಡಳಿತಕ್ಕೆ ಮಣೆ ಹಾಕುತ್ತಿವೆ. ಇದರಿಂದ ಕೇಡರ್ ಆಧಾರಿತ ಪಕ್ಷಗಳು ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿವೆ ಎಂದು ವರದಿ ಎಚ್ಚರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.