ADVERTISEMENT

ಸಿಬಿಐ ಸ್ವತಂತ್ರ ಸಂಸ್ಥೆಯಾಗಬೇಕು: ಸಿಜೆಐ ರಮಣ ಕಿವಿಮಾತು

ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 21:06 IST
Last Updated 1 ಏಪ್ರಿಲ್ 2022, 21:06 IST
ಸಿಜೆಐ ಎನ್‌.ವಿ ರಮಣ
ಸಿಜೆಐ ಎನ್‌.ವಿ ರಮಣ    

ನವದೆಹಲಿ: ‘ದೇಶದಲ್ಲಿ ಪ್ರಭುತ್ವ ಬದಲಾಗುತ್ತದೆ. ಆದರೆ ತನಿಖಾ ಸಂಸ್ಥೆಗಳು ಶಾಶ್ವತ. ಹೀಗಾಗಿ ಸಿಬಿಐ ಸ್ವತಂತ್ರ ಸಂಸ್ಥೆಯಾಗಬೇಕು’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಸಿಬಿಐಗೆ ಕಿವಿಮಾತು ಹೇಳಿದ್ದಾರೆ.

ಸಿಬಿಐ ಇಲ್ಲಿ ಶುಕ್ರವಾರ ಆಯೋಜಿಸಿದ್ದ ಡಿ.ಪಿ.ಕೊಹ್ಲಿ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ರಮಣ ಅವರು, ‘ಪ್ರಜಾಪ್ರಭುತ್ವ:ತನಿಖಾ ಸಂಸ್ಥೆಗಳ ಪಾತ್ರ ಮತ್ತು ಹೊಣೆಗಾರಿಕೆಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಈ ವೇಳೆ ಸ್ವತಂತ್ರ ತನಿಖಾ ಸಂಸ್ಥೆಯ ಅಗತ್ಯವನ್ನು ಒತ್ತಿ ಹೇಳಿದರು.

‘ನೀವು ಯಾವುದೋ ಒಬ್ಬ ವ್ಯಕ್ತಿಗೆ ನಿಷ್ಠರಾಗಿರಬೇಕಿಲ್ಲ. ಬದಲಿಗೆ, ಸಂವಿಧಾನ ಮತ್ತು ಕಾನೂನಿಗೆ ನಿಷ್ಠರಾಗಿ ಇರಬೇಕು ಎಂಬುದನ್ನು ಮರೆಯಬಾರದು. ನೀವು ಇವೆಲ್ಲವುಗಳ ವಿರುದ್ಧ ಎದ್ದುನಿಂತರೆ, ನಿಮ್ಮನ್ನು ನಿಮ್ಮ ಶೌರ್ಯ, ಸಿದ್ಧಾಂತಗಳು ಮತ್ತು ಧೈರ್ಯದ ಹೆಸರಿನಲ್ಲಿ ನೆನಪಿನಲ್ಲಿ ಇರಿಸಿಕೊಳ್ಳಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಎಲ್ಲ ತನಿಖಾ ಸಂಸ್ಥೆಗಳು ಒಂದೇ ಪ್ರಾಧಿಕಾರದಲ್ಲಿರಬೇಕು’: ‘ಈಗ ಒಂದೇ ಪ್ರಕರಣವನ್ನು ಹಲವು ತನಿಖಾ ಸಂಸ್ಥೆಗಳು ತನಿಖೆಗೆ ಒಳಪಡಿಸುತ್ತವೆ. ಹೀಗಾಗಿ ಸಿಬಿಐ, ಜಾರಿ ನಿರ್ದೇಶನಾಲಯ, ಗಂಭೀರ ವಂಚನೆ ತನಿಖಾ ಕಚೇರಿಯಂತಹ ಸಂಸ್ಥೆಗಳನ್ನು ಒಂದೇ ಪ್ರಾಧಿಕಾರದ ಅಡಿ ತರಬೇಕಾದ ತುರ್ತು ಅಗತ್ಯವಿದೆ. ಆಯಾ ಸಂಸ್ಥೆಗಳ ಅಧಿಕಾರ, ಕಾರ್ಯ ವ್ಯಾಪ್ತಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು’ ಎಂದು ರಮಣ ಅವರು ಪ್ರತಿಪಾದಿಸಿದ್ದಾರೆ.

‘ಈ ಎಲ್ಲಾ ಸಂಸ್ಥೆಗಳನ್ನು ಸ್ವತಂತ್ರ ಮತ್ತು ನಿಷ್ಪಕ್ಷಪಾತವಾದ ಪ್ರಾಧಿಕಾರವು ಮುನ್ನಡೆಸಬೇಕು. ಸಿಬಿಐ ನಿರ್ದೇಶಕರನ್ನು ನೇಮಕ ಮಾಡುವಂತಹ ಸಮಿತಿಯೇ ಇದರ ಮುಂದಾಳುವನ್ನು ನೇಮಕ ಮಾಡಬೇಕು. ತನಿಖಾ ಸಂಸ್ಥೆಗಳು ಕಿರುಕುಳದ ಸಾಧನಗಳಾಗಿವೆ ಎಂಬ ಆರೋಪನ್ನು ಈ ವ್ಯವಸ್ಥೆ ಹೋಗಲಾಡಿಸುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.