ADVERTISEMENT

ಚೆನ್ನೈ| ರಾಜಕೀಯ ಪಕ್ಷಗಳ ರ‍್ಯಾಲಿಗೆ ಎಸ್‌ಒಪಿ: ಸರ್ವ ಪಕ್ಷಗಳ ಸಭೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 15:38 IST
Last Updated 3 ನವೆಂಬರ್ 2025, 15:38 IST
   

ಚೆನ್ನೈ: ರಾಜ್ಯದಲ್ಲಿ ರಾಜಕೀಯ ಸಭೆಗಳು ಮತ್ತು ರ‍್ಯಾಲಿ ಆಯೋಜಿಸಲು ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ರಚಿಸುವುದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ತಮಿಳುನಾಡು ಸರ್ಕಾರವು ಸರ್ವ ಪಕ್ಷಗಳ ಸಭೆಯನ್ನು ಕರೆದಿದೆ.

ಎಸ್‌ಒಪಿ ರಚನೆಗೆ ಸಂಬಂಧಿಸಿದಂತೆ ಮದ್ರಾಸ್‌ ಹೈಕೋರ್ಟ್‌ ನೀಡಿರುವ ಗಡುವು ಮುಗಿಯಲು ಒಂದು ವಾರ ಬಾಕಿ ಇರುವಾಗಲೇ ಸರ್ಕಾರ ಸಭೆ ಕರೆದಿದೆ.

ಗುರುವಾರ ನಡೆಯಲಿರುವ ಸಭೆಯಲ್ಲಿ ಹಿರಿಯ ಸಚಿವರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಚುನಾವಣಾ ಆಯೋಗದ ಮಾನ್ಯತೆ ಹೊಂದಿರುವ ರಾಜಕೀಯ ಪಕ್ಷಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಆದರೆ ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ಸಭೆಯಲ್ಲಿ ಭಾಗವಹಿಸುತ್ತಿಲ್ಲ.

ADVERTISEMENT

ಇತ್ತೀಚೆಗೆ ಕರೂರಿನಲ್ಲಿ ನಟ ವಿಜಯ್‌ ಅವರು ನಡೆಸಿದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಮಂದಿ ಮೃತಪಟ್ಟ ದುರಂತದ ಬಳಿಕ ಇಂಥ ಅವಘಡಗಳನ್ನು ತಡೆಯುವ ಉದ್ದೇಶದಿಂದ ಎಸ್‌ಒಪಿ ರಚನೆಗೆ ನಿರ್ಧರಿಸಲಾಗಿದೆ.

ಸಭೆ ಬಳಿಕ ಸರ್ಕಾರವು ಎಸ್‌ಒಪಿ ಕರಡನ್ನು ಮುಖ್ಯ ನ್ಯಾಯಮೂರ್ತಿ ಎಂ.ಎಂ.ಶ್ರೀವಾತ್ಸವ ಮತ್ತು ನ್ಯಾಯಮೂರ್ತಿ ಜಿ.ಅರುಣ್‌ ಮುರುಗನ್‌ ಅವರಿರುವ ಪೀಠಕ್ಕೆ ನವೆಂಬರ್‌ 11ರಂದು ಸಲ್ಲಿಸುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.