ADVERTISEMENT

ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿಗೆ ಬಿಹಾರ ಮರುಕ: ಸಿಬಿಐ ತನಿಖೆಗೆ ಆಗ್ರಹ 

ಪಿಟಿಐ
Published 15 ಜೂನ್ 2020, 3:29 IST
Last Updated 15 ಜೂನ್ 2020, 3:29 IST
ಬಿಹಾರದ ಪಟನಾದಲ್ಲಿ ನೆಲೆಸಿರುವ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ತಂದೆಯನ್ನು ಸಮಾಧಾನಗೊಳಿಸುತ್ತಿರುವ ಸಂಬಂಧಿಗಳು
ಬಿಹಾರದ ಪಟನಾದಲ್ಲಿ ನೆಲೆಸಿರುವ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ತಂದೆಯನ್ನು ಸಮಾಧಾನಗೊಳಿಸುತ್ತಿರುವ ಸಂಬಂಧಿಗಳು    

ಪಟನಾ: ಬಿಹಾರ ಮೂಲದಿಂದ ಬಂದು ಬಾಲಿವುಡ್‌ನಲ್ಲಿ ಮಿಂಚಿದ ವಿರಳ ಕಲಾವಿದರಲ್ಲಿ ಒಬ್ಬರಾಗಿದ್ದ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿಗೆ ಇಡೀ ರಾಜ್ಯವೇ ಮರುಗಿದೆ. ರಾಜಕಾರಣಿಗಳು, ಪ್ರಖ್ಯಾತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲ, ರಾಜ್ಯದಿಂದ ಬೆಳೆದ ಕಲಾವಿದನ ಸಾವಿನ ನೋವನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಹಲವರು ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಮುಂಬೈನ ತಮ್ಮ ನಿವಾಸದಲ್ಲಿ ಸುಶಾಂತ್‌ ಸಿಂಗ್‌ ರಜಪೂತ್‌ ಅವರು ನೇಣುಬಿಗಿದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದ್ದರು.
ಅವರ ಸಾವಿಗೆ ರಾಜ್ಯಪಾಲ ಫಾಗು ಚೌಹಾನ್ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ADVERTISEMENT

ಬಿಹಾರದಿಂದ ಬಂದು ಬಾಲಿವುಡ್‌ನಲ್ಲಿ ಛಾಪು ಮೂಡಿಸಿದವರಲ್ಲಿ ಪ್ರಮುಖರೆನಿಸಿದ, ಕಾಂಗ್ರೆಸ್‌ನ ಹಿರಿಯ ಮುಖಂಡ ಶತ್ರುಘ್ನ ಸಿನ್ಹಾ, ಸರಣಿ ಟ್ವೀಟ್‌ಗಳ ಮೂಲಕ ದುಃಖ ಮತ್ತು ಆಘಾತವನ್ನು ವ್ಯಕ್ತಪಡಿಸಿದರು. "ಆತ್ಮಹತ್ಯೆ ಎಲ್ಲದಕ್ಕೂ ಉತ್ತರವಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ರಾಜ್ಯದ ಎಲ್ಲ ಪಕ್ಷಗಳೂ ಪತ್ರಿಕಾ ಪ್ರಕಟಣೆಗಳ ಮೂಲಕ ಸಂತಾಪ ಸೂಚಿಸಿವೆ.

ಸಿಬಿಐ ತನಿಖೆಗೆ ಆಗ್ರಹ

ಇನ್ನೊಂದೆಡೆ, ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ರಜಪೂತ ಸಮುದಾಯದವರೇ ಅಧಿಕವಾಗಿರುವ ಕೋಸಿ ಸೀಮಾಂಚಲ್ ಪ್ರದೇಶದ ರಾಜಕೀಯ ನಾಯಕರಾದ ಲವ್ಲಿ ಆನಂದ್ ಮತ್ತು ಪಪ್ಪು ಯಾದವ್ ಅವರು ಸುಶಾಂತ್‌ ಸಿಂಗ್‌ ಕುಟುಂಬಸ್ಥರನ್ನು ಭೇಟಿಯಾಗಿ ದುಃಖತಪ್ತ ಪೋಷಕರನ್ನು ಸಮಾಧಾನಪಡಿಸಿದರು. ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕಾಗಿ ಒತ್ತಾಯಿಸಿದರು.

ಬಿಹಾರದ ಆಮ್‌ ಆದ್ಮಿ ಘಟಕವೂ ಸುಶಾಂತ್‌ ಸಾವಿನ ಸಿಬಿಐ ತನಿಖೆಗೆ ಆಗ್ರಹಿಸಿತು. ಅಲ್ಲದೆ, ‘ಬಿಹಾರಿಗಳ ವಿರುದ್ಧದ ಬಾಲಿವುಡ್‌ ಹಗೆತನ 34 ವರ್ಷದ ಚಿಕ್ಕ ವಯಸ್ಸಿನಲ್ಲಿ ನಟನನ್ನು ಆತ್ಮಹತ್ಯೆಗೆ ದೂಡಿದೆ,’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.