
ಚೆನ್ನೈ: ಶಾಸಕ ಕೆ. ಪೊನ್ಮುಡಿ ಅವರನ್ನು ಸಚಿವರನ್ನಾಗಿ ಪುನಃ ನೇಮಿಸುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿರುವ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರ ಕ್ರಮಕ್ಕೆ ಆಡಳಿತರೂಢ ಡಿಎಂಕೆ ಪಕ್ಷವು ತೀವ್ರ ಕಿಡಿಕಾರಿದೆ.
‘ರವಿ ಅವರು ರಾಜ್ಯಪಾಲರ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರಲ್ಲ. ಅವರ ಈ ಕ್ರಮ ಸಂವಿಧಾನದ ಉಲ್ಲಂಘನೆ’ ಎಂದೂ ವಾಗ್ದಾಳಿ ನಡೆಸಿದೆ.
‘ರಾಜ್ಯಪಾಲರು ಪದೇ ತಪ್ಪೆಸೆಗುವ ಅಪರಾಧಿ ಎಂಬುದನ್ನು ಸಾಬೀತುಮಾಡುತ್ತಿದ್ದಾರೆ ಮತ್ತು ಅವರು ಸಂವಿಧಾನವನ್ನು ಅಗೌರವಿಸುತ್ತಿದ್ದಾರೆ’ ಎಂದು ಡಿಎಂಕೆ ರಾಜ್ಯಸಭೆ ಸದಸ್ಯ ಮತ್ತು ಹಿರಿಯ ವಕೀಲ ಪಿ. ವಿಲ್ಸನ್ ಆರೋಪಿಸಿದ್ದಾರೆ.
ಪೊನ್ಮುಡಿ ಅವರ ಅನರ್ಹತೆ ಮುಗಿದಿದೆ ಎಂದು ತಮಿಳುನಾಡು ವಿಧಾನಸಭೆಯು ಅಧಿಕೃತವಾಗಿ ಘೋಷಿಸಿದೆ. ಚುನಾವಣಾ ಆಯೋಗವು ಪೊನ್ಮುಡಿಯವರ ತಿರುಕೋಯಿಲೂರ್ ಕ್ಷೇತ್ರಕ್ಕೆ ಹೊರಡಿಸಿದ್ದ ಅಧಿಸೂಚನೆ ಹಿಂಪಡೆದಿದೆ. ಆದರೂ ರಾಜ್ಯಪಾಲರು, ‘ಮದ್ರಾಸ್ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿಲ್ಲ, ಕೇವಲ ಅಮಾನತುಗೊಳಿಸಿದೆ’ ಎಂದು ಅಸಂಬದ್ಧವಾಗಿ ವ್ಯಾಖ್ಯಾನಿಸಿದ್ದಾರೆ. ಇದರಿಂದ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಅಪಚಾರವಾಗಿದೆ ಎಂದು ವಿಲ್ಸನ್ ಹೇಳಿದ್ದಾರೆ.
ಸಚಿವರಾಗಿದ್ದ ಪೊನ್ಮುಡಿ ಅವರನ್ನು ಆಸ್ತಿ ಅಕ್ರಮ ಸಂಪಾದನೆ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ದೋಷಿ ಎಂದು ನಿರ್ಧರಿಸಿ, 3 ವರ್ಷ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿತ್ತು. ಈ ಬೆಳವಣಿಗೆಯ ನಂತರ ಪೊನ್ಮುಡಿ ಅವರನ್ನು ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುವ ಸಂಬಂಧ ಮಾರ್ಚ್ 13 ರಂದು ಸ್ಟಾಲಿನ್ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಆದರೆ, ಇದಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.