ADVERTISEMENT

ಬುಂದೇಲ್‌ಖಂಡ್‌: ವಾರದಲ್ಲೇ ಮಳೆಗೆ ಗುಂಡಿ ಬಿದ್ದ ಮೋದಿ ಉದ್ಘಾಟಿಸಿದ್ದ ರಸ್ತೆ

ಪಿಟಿಐ
Published 22 ಜುಲೈ 2022, 7:35 IST
Last Updated 22 ಜುಲೈ 2022, 7:35 IST
ಬುಂದೇಲ್‌ಖಂಡ್‌ ಎಕ್ಸ್‌ಪ್ರೆಸ್‌ವೇ ರಸ್ತೆಯ ಒಂದು ಭಾಗದಲ್ಲಿ ಮಳೆಯಿಂದಾಗಿ ಬಿದ್ದ ಗುಂಡಿ.
ಬುಂದೇಲ್‌ಖಂಡ್‌ ಎಕ್ಸ್‌ಪ್ರೆಸ್‌ವೇ ರಸ್ತೆಯ ಒಂದು ಭಾಗದಲ್ಲಿ ಮಳೆಯಿಂದಾಗಿ ಬಿದ್ದ ಗುಂಡಿ.   

ಜಾಲೌನ್‌(ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ 296 ಕಿ.ಮೀ. ಉದ್ದದ ಬುಂದೇಲ್‌ಖಂಡ್‌ ಎಕ್ಸ್‌ಪ್ರೆಸ್‌ವೇ ರಸ್ತೆಯ ಒಂದು ಭಾಗದಲ್ಲಿ ಮಳೆಗೆ ಗುಂಡಿ ಬಿದ್ದಿದೆ.

ಉತ್ತರ ಪ್ರದೇಶದ ಜಾಲೌನ್‌ ಜಿಲ್ಲೆಯ ಚಿರಿಯಾ ಸಲೆಂಪುರ ಪ್ರದೇಶದಲ್ಲಿ ಹಾದು ಹೋಗಿರುವ ಮಾರ್ಗದಲ್ಲಿ ಅಭಿವೃದ್ಧಿಪಡಿಸಲಾದ ರಸ್ತೆಯ ಒಂದು ಭಾಗದಲ್ಲಿ ಕನಿಷ್ಠ ಒಂದೂವರೆ ಅಡಿಗಳಷ್ಟು ಆಳವಿರುವ ಗುಂಡಿ ಬಿದ್ದಿದೆ ಎಂದು ಯುಪಿ ಎಕ್ಸ್‌ಪ್ರೆಸ್‌ವೇ ಇಂಡಸ್ಟ್ರಿಯಲ್‌ ಅಥಾರಿಟಿಯ ವಕ್ತಾರ ದುರ್ಗೇಶ್‌ ಉಪಾಧ್ಯಾಯ ಹೇಳಿದ್ದಾರೆ.

ತುರ್ತಾಗಿ ರಸ್ತೆ ಗುಂಡಿಯನ್ನು ಮುಚ್ಚಲಾಗಿದ್ದು, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ದುರ್ಗೇಶ್‌ ಉಪಾಧ್ಯಾಯ ತಿಳಿಸಿದ್ದಾರೆ.

ADVERTISEMENT

ಬಿಜೆಪಿ ಸಂಸದ ವರುಣ್‌ ಗಾಂಧಿ ವಾಗ್ದಾಳಿ

₹ 15 ಸಾವಿರ ಕೋಟಿ ವೆಚ್ಚ ಮಾಡಿ ನಿರ್ಮಿಸಿರುವ ಎಕ್ಸ್‌ಪ್ರೆಸ್‌ವೇ 5 ದಿನಗಳ ಮಳೆಯನ್ನು ಎದುರಿಸಿ ನಿಲ್ಲಲು ಸಾಧ್ಯವಾಗುವುದಿಲ್ಲ ಎಂದಾದರೆ, ಅದರ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಯೋಜನೆಯ ಮುಖ್ಯಸ್ಥ, ಸಂಬಂಧಪಟ್ಟ ಇಂಜಿನಿಯರ್‌, ಕಾಮಗಾರಿ ನಡೆಸಿದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವರುಣ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಬುಂದೇಲ್‌ಖಂಡ್‌ ಎಕ್ಸ್‌ಪ್ರೆಸ್‌ವೇಯನ್ನು ದೊಡ್ಡ ಮನುಷ್ಯರು ಉದ್ಘಾಟಿಸಿದರು. ಒಂದೇ ವಾರದಲ್ಲಿ ಭ್ರಷ್ಟಾಚಾರದ ದೊಡ್ಡ ಹೊಂಡಗಳು ಕಾಣಿಸಿಕೊಂಡವು. ಬಿಜೆಪಿ ಅಭಿವೃದ್ಧಿ ಕೆಲಸಗಳನ್ನು ಕೇವಲ ಅರ್ಧಕ್ಕರ್ಧ ಪೂರ್ಣಗೊಳಿಸುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯಿದು ಎಂದು ಎಸ್‌ಪಿ ವರಿಷ್ಠ ಅಖಿಲೇಶ್‌ ಯಾದವ್‌ ವಾಗ್ದಾಳಿ ನಡೆಸಿದ್ದಾರೆ. ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.