ADVERTISEMENT

ಗಾಲ್ವನ್ ಸಂಘರ್ಷ: ದಕ್ಷಿಣ ಚೀನಾ ಸಮುದ್ರದಲ್ಲಿ ಯುದ್ಧನೌಕೆ ನಿಯೋಜಿಸಿದ್ದ ಭಾರತ

ಏಜೆನ್ಸೀಸ್
Published 30 ಆಗಸ್ಟ್ 2020, 11:13 IST
Last Updated 30 ಆಗಸ್ಟ್ 2020, 11:13 IST
ಭಾರತೀಯ ಯುದ್ಧನೌಕೆ (ಪ್ರಾತಿನಿಧಿಕ ಚಿತ್ರ)
ಭಾರತೀಯ ಯುದ್ಧನೌಕೆ (ಪ್ರಾತಿನಿಧಿಕ ಚಿತ್ರ)   

ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ನಡೆದಿದ್ದ ಸಂಘರ್ಷದ ಬಳಿಕ ಕ್ರಿಪ್ರವಾಗಿ ಕಾರ್ಯಾಚರಣೆ ನಡೆಸಿದ್ದ ಭಾರತೀಯ ನೌಕಾಪಡೆಯು ದಕ್ಷಿಣ ಚೀನಾ ಸಮುದ್ರಕ್ಕೆ ಯುದ್ಧನೌಕೆಯನ್ನು ಕಳುಹಿಸಿಕೊಟ್ಟಿತ್ತು. ಉಭಯ ದೇಶಗಳ ನಡುವಣ ಮಾತುಕತೆ ಮಧ್ಯೆಯೇ ಭಾರತ ಈ ಕ್ರಮ ಕೈಗೊಂಡದ್ದು ಚೀನಾದ ಅಸಮಾಧಾನಕ್ಕೆ ಕಾರಣವಾಗಿತ್ತು ಎಂಬುದು ತಿಳಿದುಬಂದಿದೆ.

ಚೀನಾ ಆ ಪ್ರದೇಶದಲ್ಲಿ 2009ರಿಂದ ಅಸ್ತಿತ್ವ ಹೆಚ್ಚಿಸಿಕೊಳ್ಳುತ್ತಾ ಬಂದಿದ್ದು, ಭಾರತೀಯ ನೌಕಾಪಡೆಯ ಯುದ್ಧನೌಕೆಗಳ ಉಪಸ್ಥಿತಿಯನ್ನು ಆಕ್ಷೇಪಿಸುತ್ತಾ ಬಂದಿದೆ.

‘ಗಾಲ್ವನ್ ಸಂಘರ್ಷದ ಬೆನ್ನಲ್ಲೇ ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತವು ಮುಂಚೂಣಿ ಯುದ್ಧನೌಕೆಯನ್ನು ನಿಯೋಜಿಸಿತ್ತು’ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಭಾರತದ ಈ ಕ್ರಮವು ಚೀನಾದ ನೌಕಾಪಡೆ ಮತ್ತು ಭದ್ರತೆಯ ಮೇಲೆ ಅಪೇಕ್ಷಿತ ಪರಿಣಾಮ ಬೀರಿತ್ತು. ಭಾರತದ ಯುದ್ಧನೌಕೆ ಆ ಪ್ರದೇಶಲ್ಲಿ ನಿಯೋಜನೆಯಾಗಿರುವ ಬಗ್ಗೆ ರಾಜತಾಂತ್ರಿಕ ಮಟ್ಟದ ಮಾತುಕತೆ ವೇಳೆ ಚೀನಾ ಪ್ರಸ್ತಾಪಿಸಿದ್ದಲ್ಲದೆ, ಆಕ್ಷೇಪಿಸಿತ್ತು’ ಎಂದು ಮೂಲಗಳು ಹೇಳಿವೆ.

ಅದೇ ಸಂದರ್ಭದಲ್ಲಿ ಅಮೆರಿಕದ ನೌಕಾಪಡೆಯೂ ದಕ್ಷಿಣ ಚೀನಾ ಸಮುದ್ರದಲ್ಲಿ ಯುದ್ಧನೌಕೆಯನ್ನು ನಿಯೋಜಿಸಿತ್ತು. ಭಾರತ ನೌಕಾಪಡೆಯು ಅಮೆರಿಕದ ಯುದ್ಧನೌಕೆಯೊಂದಿಗೆ ನಿರಂತರ ಸಂಪರ್ಕದಲ್ಲಿತ್ತು ಎಂದು ವರದಿ ಉಲ್ಲೇಖಿಸಿದೆ.

‘ವಾಡಿಕೆಯಂತೆ, ಆ ಪ್ರದೇಶದಲ್ಲಿರುವ ಇತರ ದೇಶಗಳ ಯುದ್ಧನೌಕೆಗಳ ಜತೆ ತನ್ನ ಚಲನೆಯ ಮಾಹಿತಿಯನ್ನು ಯುದ್ಧನೌಕೆ ಆಗಾಗ ಹಂಚಿಕೊಳ್ಳುತ್ತಿತ್ತು. ಇಡೀ ಕಾರ್ಯಾಚರಣೆಯನ್ನು ಅತ್ಯಂತ ರಹಸ್ಯವಾಗಿ ನಡೆಸಲಾಗಿತ್ತು’ ಎಂದೂ ಮೂಲಗಳು ಮಾಹಿತಿ ನೀಡಿವೆ.

ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾ ಪಡೆಗಳು ಮತ್ತು ಭಾರತೀಯ ಸೇನೆ ನಡುವೆ ನಡೆದಿದ್ದ ಸಂಘರ್ದಲ್ಲಿ ಕರ್ನಲ್ ಶ್ರೇಣಿ ಅಧಿಕಾರಿ ಸೇರಿದಂತೆ 20 ಮಂದಿ ಹುತಾತ್ಮರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.