ADVERTISEMENT

ತಮಿಳು ಭಾಷೆ ಹೊಗಳಿದ ಮೋದಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 19:45 IST
Last Updated 30 ಸೆಪ್ಟೆಂಬರ್ 2019, 19:45 IST
   

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳು ಭಾಷೆಯ ಮೇಲೆ ಹೊಗಳಿಕೆಯ ಸುರಿಮಳೆಗೈದಿದ್ದಾರೆ. ತಮಿಳು ಕವಿ ಕಣಿಯನ್‌ ಪೂಂಗುದ್ರನಾರ್‌ ಅವರ ‘ಜಗತ್ತು ಒಂದೇ’ ಎಂಬ ಸಾಲುಗಳನ್ನುವಿಶ್ವಸಂಸ್ಥೆಯ ಮಹಾಧಿವೇಶನದ ಭಾಷಣದಲ್ಲಿ ಮೋದಿ ಉಲ್ಲೇಖಿಸಿದ್ದರು. ಅದಾಗಿ ಮೂರು ದಿನಗಳ ಬಳಿಕವೂ ‘ಜಗತ್ತಿನ ಅತ್ಯಂತ ಹಳೆಯ ಭಾಷೆ’ಯ ಬಗೆಗಿನ ‘ಪ್ರೀತಿ’ ಪ್ರದರ್ಶನವನ್ನು ಅವರು ಮುಂದುವರಿಸಿದ್ದಾರೆ.

ಬಿಜೆಪಿ ಕಾರ್ಯಕರ್ತು ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮ, ಭಾರತ–ಸಿಂಗಪುರ ಹ್ಯಾಕಥಾನ್‌ ಮತ್ತು ಮದ್ರಾಸ್‌ ಐಐಟಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿಪ್ರಧಾನಿಯವರು ಚೆನ್ನೈಯಲ್ಲಿ ಸೋಮವಾರ ಭಾಗವಹಿಸಿದರು. ಈ ಎಲ್ಲ ಕಾರ್ಯಕ್ರಮದಲ್ಲಿಯೂ ತಮಿಳುನಾಡು, ಅದರ ಸಂಸ್ಕೃತಿ, ಪರಂಪರೆ ಮತ್ತು ತಮಿಳು ಭಾಷೆಯ ಬಗ್ಗೆ ಮಾತನಾಡಿದರು.

ಜಗತ್ತಿನ ಅತ್ಯಂತ ಪುರಾತನ ಭಾಷೆತಮಿಳು ಎಂದ ಅವರು ತಮಿಳು ಆಹಾರ ಇಡ್ಲಿ, ಸಾಂಬಾರ್‌ ಮತ್ತು ದೋಸೆಯ ಸ್ವಾದವನ್ನು ಹೊಗಳಿದರು. ಪಲ್ಲವ ಅರಸರು ನಿರ್ಮಿಸಿದ್ದ ಮಾಮಲ್ಲಪುರಂಗೆ ಎಲ್ಲರೂ ಭೇಟಿ ನೀಡಬೇಕು ಎಂದು ಹೇಳಿದರು. ಈ ಮೂಲಕ ತಮಿಳು ಜನರ ಮನಗೆಲ್ಲುವ ಯತ್ನವನ್ನು ಮೋದಿ ಮಾಡಿದರು.

ADVERTISEMENT

‘ಅಮೆರಿಕ ಪ್ರವಾಸದ ಸಂದರ್ಭದಲ್ಲಿ ನಾನು ತಮಿಳಿನಲ್ಲಿ ಒಂದು ಮಾತು ಆಡಿದ್ದೆ. ಜಗತ್ತಿನ ಅತ್ಯಂತ ಪ್ರಾಚೀನ ಭಾಷೆತಮಿಳು ಎಂದೂ ಹೇಳಿದೆ. ಈಗ ಅಮೆರಿಕದಲ್ಲಿ ಇದುವೇ ಚರ್ಚೆಯ ವಿಷಯವಾಗಿದೆ’ ಎಂದು ಬಿಜೆಪಿ ಕಾರ್ಯಕರ್ತರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದರು.

‘ದಕ್ಷಿಣದ ರಾಜ್ಯಗಳ ಮೇಲೆ ಕೇಂದ್ರವು ಹಿಂದಿ ಹೇರಲು ಯತ್ನಿಸುತ್ತಿದೆ’ ಎಂದು ಇತ್ತೀಚೆಗೆ ಕೇಳಿಬಂದ ಆಕ್ಷೇಪಗಳ ಹಿನ್ನೆಲೆಯಲ್ಲಿ ಮೋದಿ ಅವರ ತಮಿಳು ಹೊಗಳಿಕೆ ಮಹತ್ವ ಪಡೆದುಕೊಡಿದೆ.

ತಮಿಳುನಾಡಿನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಿಜೆಪಿ ಇನ್ನಿಲ್ಲದ ಯತ್ನ ನಡೆಸುತ್ತಿದೆ. ಲೋಕಸಭೆಗೆ ಏಪ್ರಿಲ್‌ನಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ ಮತ್ತು ಇತರ ಹಲವು ಪಕ್ಷಗಳ ಜತೆಗೂಡಿ ಭಾರಿ ಮೈತ್ರಿಕೂಟವನ್ನು ಬಿಜೆಪಿ ಮಾಡಿಕೊಂಡಿತ್ತು. ಹಾಗಿದ್ದರೂ ಅಲ್ಲಿ ಒಂದೇ ಒಂದು ಕ್ಷೇತ್ರ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿಲ್ಲ. ಆದರೆ, ನೆಲೆ ಕಂಡುಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮುಂದುವರಿಸಿದೆ.

ಎರಡನೇ ಅವಧಿಗೆ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ತಮಿಳು ಭಾಷೆಯನ್ನು ಕೇಂದ್ರದ ಕೆಲವು ಸಚಿವರು ಹೊಗಳಲಾರಂಭಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜುಲೈನಲ್ಲಿ ಮಂಡಿಸಿದ ಬಜೆಟ್‌ ಭಾಷಣದಲ್ಲಿ ತಮಿಳಿನ ಕಾವ್ಯವನ್ನು ಉಲ್ಲೇಖಿಸಿದ್ದರು.

‘ಗೋಬ್ಯಾಕ್‌’–‘ವೆಲ್‌ಕಮ್‌’ ಸಂಘರ್ಷ

ಮೋದಿ ಭೇಟಿಯ ಸಂದರ್ಭವು ಬಿಜೆಪಿ ಅಭಿಮಾನಿಗಳು ಮತ್ತು ವಿರೋಧಿಗಳ ನಡುವೆ ಬಾರಿ ಟ್ವಿಟರ್‌ ಸಮರಕ್ಕೆ ಕಾರಣವಾಗಿದೆ. ‘ಗೋಬ್ಯಾಕ್‌ ಮೋದಿ’ ಮತ್ತು ‘ಟಿಎನ್‌ ವೆಲ್‌ಕಮ್ಸ್‌ ಮೋದಿ’ ಹ್ಯಾಷ್‌ಟ್ಯಾಗ್‌ಗಳು ಸಂಚಲನ ಮೂಡಿಸಿವೆ.

‘ಗೋಬ್ಯಾಕ್‌ ಮೋದಿ’ ಹ್ಯಾಷ್‌ಟ್ಯಾಗ್‌ನಲ್ಲಿ ಸೋಮವಾರ ಬೆಳಿಗ್ಗೆ 10.30ರ ಹೊತ್ತಿಗೇ 29 ಸಾವಿರ ಟ್ವೀಟ್‌ಗಳಿದ್ದವು. ‘ಟಿಎನ್‌ ವೆಲ್‌ಕಮ್ಸ್‌ ಮೋದಿ’ಯಲ್ಲಿ 11,300 ಟ್ವೀಟ್‌ಗಳಿದ್ದವು. ‘ಗೋಬ್ಯಾಕ್‌ ಮೋದಿ’ ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ ಜಿಎಸ್‌ಟಿ ಜಾರಿ, ನೋಟು ರದ್ದತಿ ಹಾಗೂ ಜಮ್ಮು ಮತ್ತು ಕಾಶ್ಮೀರದ ನಿರ್ವಹಣೆಯನ್ನು ಸರ್ಕಾರದ ವೈಫಲ್ಯಗಳು ಎಂದು ಹೇಳಲಾಗಿದೆ.

2018ರ ಏಪ್ರಿಲ್‌ 12ರಂದು ಮೋದಿ ಅವರು ಚೆನ್ನೈಗೆ ಭೇಟಿ ಕೊಟ್ಟಾಗ ‘ಗೋಬ್ಯಾಕ್‌ ಮೋದಿ’ ಹ್ಯಾಷ್‌ಟ್ಯಾಗ್‌ ಮೊದಲ ಬಾರಿಗೆ ಜೋರು ಸದ್ದು ಮಾಡಿತ್ತು. ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಕೇಂದ್ರದ ನಿಷ್ಕ್ರಿಯತೆಯನ್ನು ವಿರೋಧಿಸಿ ಈ ಹ್ಯಾಷ್‌ಟ್ಯಾಗ್‌ ಆರಂಭಿಸಲಾಗಿತ್ತು. ಇದಕ್ಕೆ ಭಾರಿ ಬೆಂಬಲವೂ ವ್ಯಕ್ತವಾಗಿತ್ತು.

ಸೋಮವಾರ ಬೆಳಿಗ್ಗಿನಿಂದಲೇ ಈ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್‌ಗಳು ಕಾಣಿಸಿಕೊಂಡಿದ್ದವು. ಆದರೆ, ಈ ಬಾರಿ, ಬಿಜೆಪಿ ಸಾಮಾಜಿಕ ಜಾಲತಾಣ ನಿರ್ವಾಹಕರು ಹೆಚ್ಚು ಎಚ್ಚರಿಕೆ ವಹಿಸಿದ್ದಾರೆ. ಹಾಗಾಗಿ, ‘ಟಿಎನ್‌ ವೆಲ್‌ಕಮ್ಸ್‌ ಮೋದಿ’ ಹ್ಯಾಷ್‌ಟ್ಯಾಗ್‌ನಲ್ಲಿ ಕೂಡ ಸಾಕಷ್ಟು ಟ್ವೀಟ್‌ಗಳು ಕಾಣಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.