ಪ್ರಯಾಗ್‌ರಾಜ್‌ನಲ್ಲಿ ಶುಕ್ರವಾರ ನಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಂಗಾ ಮಾತೆಯ ವಿಗ್ರಹ ನೀಡಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸನ್ಮಾನಿಸಿದರು.
ಪ್ರಯಾಗ್‌ರಾಜ್: ‘ಮಹಾ ಕುಂಭಮೇಳ– 2025’ ಅನ್ನು ಏಕತೆಯ ಮಹಾಯಜ್ಞವಾಗಿದೆ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇದು ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಗುರುತನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.
ನಗರದ ಸಂಗಮ ತೀರದಲ್ಲಿ ಸುಮಾರು ₹ 5,500 ಕೋಟಿ ವೆಚ್ಚದ 167 ಅಭಿವೃದ್ಧಿ ಕಾಮಗಾರಿ, ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಅವರು ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.
’ಜಗತ್ತಿಗೆ ಏಕತೆಯ ಸಂದೇಶ ಸಾರುವ ಈ ಮೇಳವು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಲಿದೆ. ಅಲ್ಲದೆ ಭಾರತದ ಡಿಜಿಟಲ್ ತಂತ್ರಜ್ಞಾನಕ್ಕೆ ಹೆಚ್ಚಿನ ಬೇಡಿಕೆಯಿದ್ದು, ವಿದೇಶಗಳಲ್ಲಿ ಭಾರತದ ಬಗ್ಗೆಗಿನ ಅಭಿಪ್ರಾಯವೂ ಬದಲಾಗಿದೆ‘ ಎಂದರು.
ಈ ಮೇಳವು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಎಂಬ ಅದ್ಭುತ ಚಿತ್ರಣವನ್ನು ಪ್ರಸ್ತುತಪಡಿಸುತ್ತದೆ. ಇಲ್ಲಿ ನಡೆಯುವ ಸಂತರ ಬೌದ್ಧಿಕ ವಿಚಾರ ಸಂಕಿರಣದಲ್ಲಿ ದೇಶದ ಮುಂದಿರುವ ಸವಾಲುಗಳನ್ನು ಚರ್ಚಿಸಲಾಗುತ್ತದೆ. ಇದು ಈ ಮೇಳದ ಅತ್ಯಂತ ಮಹತ್ವದ ಅಂಶವಾಗಿದೆ ಎಂದು ಅವರು ವಿವರಿಸಿದರು.
45 ದಿನಗಳವರೆಗೆ ನಡೆಯುವ ಮಹಾಯಜ್ಞ ಅಪರೂಪವಾಗಿದ್ದು, ಸಂತರು, ದಾರ್ಶನಿಕರು, ಬುದ್ಧಿಜೀವಿಗಳು ಮತ್ತು ಜನಸಾಮಾನ್ಯರ ಸಮಾಗಮ ಆಗುತ್ತದೆ. ಅವರೆಲ್ಲರೂ ಇಲ್ಲಿನ ಸಂಗಮದಲ್ಲಿ ಮಿಂದೇಳುತ್ತಾರೆ. ಜಾತಿ ಮತ್ತು ಸಮುದಾಯಗಳ ಭೇದಗಳನ್ನು ತೊಲಗಿಸಲು ಪಣತೊಡುತ್ತಾರೆ ಎಂದು ತಿಳಿಸಿದರು.
ಭಾರತವು ಗಂಗಾ, ಯಮುನಾ, ಸರಸ್ವತಿ, ಕಾವೇರಿ ಮತ್ತು ನರ್ಮದಾ ಸೇರಿದಂತೆ ಅನೇಕ ಪುಣ್ಯನದಿಗಳಿರುವ ಪವಿತ್ರ ಭೂಮಿ. ಮೇಳಕ್ಕೆ ಬರುವ ಸಾಧು, ಸಂತರು, ಸಾಧಕರಿಂದ ಈ ಭೂಮಿಯ ಪಾವಿತ್ರ್ಯತೆ ಮತ್ತಷ್ಟು ಹೆಚ್ಚಲಿದೆ. ಮಹಾಕುಂಭಮೇಳಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆಯಿದ್ದು ನಮ್ಮ ಸಂಸ್ಕತಿ, ಸಂಪ್ರದಾಯದ ಪ್ರತೀಕವಾಗಿದೆ. ಇಲ್ಲಿ ಧರ್ಮ, ಜ್ಞಾನ, ಭಕ್ತಿ ಮತ್ತು ಕಲೆಯ ಸಮ್ಮಿಲನವಾಗಲಿದೆ ಎಂದು ಅವರು ಬಣ್ಣಿಸಿದರು.
ಮಹಾಕುಂಭದ ಸಿದ್ಧತೆಯ ಭಾಗವಾಗಿ ಪ್ರಯಾಗ್‌ರಾಜ್‌ನ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಗೆ ವಿಶೇಷ ಗಮನ ಹರಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲು ‘ಗಂಗಾಧೂತ’ ಮತ್ತು ‘ಗಂಗಾ ಮಿತ್ರ’ರನ್ನು ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು (2025) ಜನವರಿ 13ರಿಂದ (ಪೌಶ್ ಪೂರ್ಣಿಮಾ) ಫೆಬ್ರುವರಿ 26ರವರೆಗೆ (ಮಹಾ ಶಿವರಾತ್ರಿ) ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದೆ.
ಪೂಜೆ ನೆರವೇರಿಸಿದ ಮೋದಿ ಪ್ರಧಾನಿ
ನರೇಂದ್ರ ಮೋದಿ ಅವರು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಪೂಜೆಗೂ ಮುನ್ನ ಅವರು ನದಿ ವಿಹಾರ ನಡೆಸಿದರು. ಕೋಟೆ ಸ್ಥಳದಲ್ಲಿರುವ ಸರಸ್ವತಿ ಮೂರ್ತಿಗೆ ನಮಿಸಿದರು. ನಂತರ ಮಹಾ ಕುಂಭಮೇಳದ ಸಿದ್ಧತಾ ಕಾರ್ಯದ ಅವಲೋಕನ ನಡೆಸಿದರು. ಇದೇ ವೇಳೆ ‘ಬಡೆ ಹನುಮಾನ್’ ಮಂದಿರದಲ್ಲೂ ಪೂಜೆ ಸಲ್ಲಿಸಿದರು. ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ವೇಳೆ ಉಪಸ್ಥಿತರಿದ್ದರು.
ಉದ್ಘಾಟನೆಗೊಂಡ ಯೋಜನೆಗಳು
* ಪ್ರಯಾಣಿಕರ ಸೌಕರ್ಯಗಳನ್ನು ಹೆಚ್ಚಿಸಲು ₹1610 ಕೋಟಿ ವೆಚ್ಚದಲ್ಲಿ 9 ರೈಲ್ವೆ ನಿಲ್ದಾಣಗಳ ಮೇಲ್ದರ್ಜೆ ಅಭಿವೃದ್ಧಿ ಕೆಲಸ ರೈಲ್ವೆ ಮೇಲ್ಸೇತುವೆ ಕೆಳ ಸೇತುವೆಗಳು ಮತ್ತು ಗಂಗಾ ನದಿಯ ಮೇಲೆ ನಿರ್ಮಿಸಿರುವ ರೈಲ್ವೆ ಸೇತುವೆ * ₹1376 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ 61 ರಸ್ತೆಗಳ ವಿಸ್ತರಣೆ ಮತ್ತು ಸುಂದರಗೊಳಿಸುವಿಕೆ ಕಾರ್ಯ * ₹304 ಕೋಟಿ ಮೊತ್ತದ ಏಳು ಶಾಶ್ವತ ಘಾಟ್‌ಗಳು ಮತ್ತು ನದಿ ಮುಂಭಾಗದ ಎಂಟು ರಸ್ತೆಗಳ ಅಭಿವೃದ್ಧಿ * ₹215 ಕೋಟಿ ವೆಚ್ಚದಲ್ಲಿ ಒಳಚರಂಡಿ ಜಾಲ ಉನ್ನತೀಕರಣ ಕುಡಿಯುವ ನೀರಿನ ಯೋಜನೆ * ₹ 203 ಕೋಟಿ ವೆಚ್ಚದಲ್ಲಿ ವಿದ್ಯುತ್ ಮೂಲ ಸೌಕರ್ಯ ಉನ್ನತೀಕರಣ –––
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.