ADVERTISEMENT

ಹೆರಿಗೆ ಸೌಲಭ್ಯಕ್ಕಾಗಿ 6 ಕಿ.ಮೀ ಕಾಡಿನಲ್ಲಿ ನಡೆದು ಮೃತಪಟ್ಟ ತುಂಬು ಗರ್ಭಿಣಿ!

​ಪ್ರಜಾವಾಣಿ ವಾರ್ತೆ
ಪಿಟಿಐ
Published 3 ಜನವರಿ 2026, 2:54 IST
Last Updated 3 ಜನವರಿ 2026, 2:54 IST
   

ಗಡ್‌ಚಿರೋಲಿ: ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ದೇಶದ ಕೆಲ ಹಳ್ಳಿಗಳು ಈಗಲೂ ರಸ್ತೆ ಸಂಪರ್ಕ, ವೈದ್ಯಕೀಯ ಸೇವೆಗಳಿಂದ ವಂಚಿತವಾಗಿವೆ ಎಂಬುದಕ್ಕೆ ಈ ಪ್ರಕರಣ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ವರದಿ ತಿಳಿಸಿದೆ.

ತೆರಿಗೆ ವಸೂಲಿಯಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರ ರಾಜ್ಯದ ಗಡ್‌ಚಿರೋಲಿ ಜಿಲ್ಲೆಯಿಂದ ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದೆ. ಮುಖ್ಯ ರಸ್ತೆಗೆ ಸಂಪರ್ಕ ಕಡಿತಗೊಂಡಿರುವ ಮತ್ತು ವೈದ್ಯಕೀಯ ಸೌಲಭ್ಯವಿಲ್ಲದ ಗ್ರಾಮವೊಂದರ ತುಂಬು ಗರ್ಭಿಣೆಯೊಬ್ಬರು ಹೆರಿಗೆ ಸೌಲಭ್ಯಕ್ಕಾಗಿ 6 ಕಿ.ಮೀ ನಡೆದು ಮೃತಪಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಗಡ್‌ಚಿರೋಲಿ ಜಿಲ್ಲೆಯ ಎಟಪಲ್ಲಿ ತಾಲೂಕಿನ ಆಲ್ದಂಡಿ ಟೋಲಾ ಗ್ರಾಮದ 24 ವರ್ಷದ ಆಶಾ ಸಂತೋಷ್ ಕಿರಂಗಾ ಮೃತ ಮಹಿಳೆ. ಆಕೆಗೆ 9 ತಿಂಗಳು ತುಂಬಿತ್ತು ಎಂದು ಅವರು ಹೇಳಿದ್ದಾರೆ.

ADVERTISEMENT

'ಆಕೆಯ ಊರಾದ ಆಲ್ದಂಡಿ ಟೋಲಾಗೆ ಮುಖ್ಯ ರಸ್ತೆಯಿಂದ ಸಂಪರ್ಕ ಕಡಿತಗೊಂಡಿದೆ. ಅಲ್ಲಿ ಹೆರಿಗೆಗೆ ಯಾವುದೇ ಸೌಲಭ್ಯಗಳು ಲಭ್ಯವಿಲ್ಲ. ಹಾಗಾಗಿ, ಸಹಾಯಕ್ಕಾಗಿ ಆಶಿಸುತ್ತಾ ಜನವರಿ 1ರಂದು ಪತಿಯೊಂದಿಗೆ ಪೆಥಾದಲ್ಲಿರುವ ಸಹೋದರಿಯ ಮನೆಗೆ ಕಾಡಿನ ಹಾದಿಯಲ್ಲಿ 6 ಕಿ. ಮೀ ನಡೆದು ಸಾಗಿದ್ದರು. ಆದರೆ, ತುಂಬು ಗರ್ಭಿಣಿಯಾಗಿದ್ದರಿಂದ ದೀರ್ಘ ನಡಿಗೆಯ ಆಯಾಸ ಸಹಿಸಲಾಗಲಿಲ್ಲ’ ಎಂದು ಅವರು ಹೇಳಿದ್ದಾರೆ.

‘ತೀವ್ರ ಆಯಾಸಗೊಂಡು ಸಹೋದರಿ ಮನೆಯಲ್ಲಿ ತಂಗಿದ್ದ ಗರ್ಭಿಣಿಗೆ ಜನವರಿ 2ರ ಬೆಳಿಗ್ಗೆ, ಹೆರಿಗೆ ನೋವು ಕಾಣಿಸಿಕೊಂಡಿದೆ. ಆಕೆಯನ್ನು ಆಂಬುಲೆನ್ಸ್ ಮೂಲಕ ಹೆಡ್ರಿಯ ಕಾಳಿ ಅಮ್ಮಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ನಿರ್ಧರಿಸಿದರೂ, ಅದಾಗಲೇ ಪರಿಸ್ಥಿತಿ ಕೈಮೀರಿ ಹೋಗಿತ್ತು. ಮಗು ಗರ್ಭದಲ್ಲಿಯೇ ಮೃತಪಟ್ಟಿತ್ತು. ರಕ್ತದೊತ್ತಡ ಹೆಚ್ಚಾದ ಕಾರಣ, ಮಹಿಳೆ ಕೂಡ ಸ್ವಲ್ಪ ಸಮಯದಲ್ಲೇ ಅಸುನೀಗಿದರು’ ಎಂದು ಅಧಿಕಾರಿ ಹೇಳಿದ್ದಾರೆ.

ಈ ಬಗ್ಗೆ ಗಡ್‌ಚಿರೋಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಪ್ರತಾಪ್ ಶಿಂಧೆ ಅವರನ್ನು ಪಿಟಿಐ ಸಂಪರ್ಕಿಸಿದಾಗ, ಆಶಾ ಕಾರ್ಯಕರ್ತರ ಮೂಲಕ ಮಹಿಳೆಯನ್ನು ನೋಂದಾಯಿಸಲಾಗಿತ್ತು ಎಂದು ಹೇಳಿದ್ದಾರೆ. ಹಠಾತ್ ಹೆರಿಗೆ ನೋವು ಮತ್ತು ದೀರ್ಘ ನಡಿಗೆಯಿಂದ ತೊಂದರೆ ಉಂಟಾಗಿರಬಹುದು. ವೈದ್ಯರು ಆಕೆಯನ್ನು ಉಳಿಸಲು ಶತ ಪ್ರಯತ್ನ ನಡೆಸಿದ್ದಾರೆ. ಆದರೂ ಸಾಧ್ಯವಾಗಲಿಲ್ಲ. ಈ ಸಂಬಂಧ ತಾಲೂಕು ಆರೋಗ್ಯ ಅಧಿಕಾರಿಯಿಂದ ವಿವರವಾದ ವರದಿಯನ್ನು ಕೋರಲಾಗಿದ್ದು, ಈ ವಿಷಯದ ಬಗ್ಗೆ ತನಿಖೆ ನಡೆಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.