ADVERTISEMENT

ಮತದಾರರ ಪಟ್ಟಿಯಿಂದ ಸಾಮೂಹಿಕವಾಗಿ ಹೆಸರು ಅಳಿಸಲು ಬಿಜೆಪಿ ಸಂಚು: ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 12:55 IST
Last Updated 11 ಡಿಸೆಂಬರ್ 2024, 12:55 IST
<div class="paragraphs"><p>ಅರವಿಂದ ಕೇಜ್ರಿವಾಲ್ </p></div>

ಅರವಿಂದ ಕೇಜ್ರಿವಾಲ್

   

ಪಿಟಿಐ ಚಿತ್ರ

ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮತದಾರರ ಪಟ್ಟಿಯಿಂದ ಸಾಮೂಹಿಕವಾಗಿ ಹೆಸರುಗಳನ್ನು ಅಳಿಸುವ ಸಂಚನ್ನು ಬಿಜೆಪಿ ರೂಪಿಸಿದೆ ಎಂದು ಆರೋಪಿಸಿರುವ ಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್, 3000 ಪುಟಗಳ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವುದಾಗಿ ಹೇಳಿದ್ದಾರೆ.

ADVERTISEMENT

ಚುನಾವಣಾ ಆಯುಕ್ತರಿಗೆ ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಡವರು, ದಲಿತರು, ವಿಶೇಷವಾಗಿ ಕೊಳೆಗೇರಿಯಲ್ಲಿ ವಾಸಿಸುತ್ತಿರುವವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಸಾಮಾನ್ಯ ವ್ಯಕ್ತಿಗೆ ಒಂದು ಮತ ಬಹಳಷ್ಟು ಮೌಲ್ಯಯುತವಾದದ್ದಾಗಿದೆ. ಈ ದೇಶದ ನಾಗರಿಕತ್ವವನ್ನು ಅದು ಅವರಿಗೆ ಒದಗಿಸುತ್ತದೆ ಎಂದಿದ್ದಾರೆ.

ಶಹದಾರದ ಬಿಜೆಪಿ ಮುಖಂಡರೊಬ್ಬರು 11,008 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಚುನಾವಣಾ ಆಯೋಗ ಈ ಸಂಬಂಧ ರಹಸ್ಯವಾಗಿ ಕೆಲಸ ಮಾಡುತ್ತಿದೆ ಎಂದಿದ್ದಾರೆ.

‘ಜನಕಪುರಿಯಲ್ಲಿ 4,874 ಮತದಾರರ ಹೆಸರುಗಳನ್ನು ಮತದಾರ ಪಟ್ಟಿಯಿಂದ ತೆಗೆಯುವಂತೆ 25 ಮಂದಿ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ. ತುಘಲಕಾಬಾದ್‌ನಲ್ಲಿ 15 ಮಂದಿ ಬಿಜೆಪಿ ಕಾರ್ಯಕರ್ತರು 2,435 ಮತದಾರರ ಹೆಸರುಗಳನ್ನು ತೆಗೆಯಲು ಮನವಿ ಸಲ್ಲಿಸಿದ್ದಾರೆ. ತುಘಲಕಾಬಾದ್‌ನ ಬೂತ್ ಸಂಖ್ಯೆ. 117ರಲ್ಲಿ 1,337 ಮತದಾರರಿದ್ದು, ಈ ಪೈಕಿ 554 ಮತದಾರರ ಹೆಸರುಗಳನ್ನು ತೆಗೆಯುವಂತೆ ಇಬ್ಬರು ಅರ್ಜಿ ಸಲ್ಲಿಸಿದ್ದಾರೆ. ಇದರರ್ಥ, ಪ್ರತಿ ಬೂತ್‌ನಲ್ಲಿ ಶೇ 40ರಷ್ಟು ಮತದಾರರನ್ನು ಕಡಿಮೆ ಮಾಡುವುದು ಇವರ ಉದ್ದೇಶವಾಗಿದೆ’ಎಂದು ಕೇಜ್ರಿವಾಲ್ ದೂರಿದ್ದಾರೆ.

ಈ ರೀತಿ ಸಾಮೂಹಿಕವಾಗಿ ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆ ಕೂಡಲೇ ನಿಲ್ಲಬೇಕು ಮತ್ತು ಅರ್ಜಿ ಹಾಕಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಚುನಾವಣಾ ಆಯೋಗವು ನಾಲ್ಕು ಭರವಸೆಗಳನ್ನು ನಮಗೆ ನೀಡಿದೆ. ಮೊದಲನೆಯದಾಗಿ, ಚುನಾವಣೆಯ ಮೊದಲು ಮತದಾರರ ಪಟ್ಟಿಯಿಂದ ಸಾಮೂಹಿಕ ಹೆಸರು ಅಳಿಸುವಿಕೆ ನಡೆಯುವುದಿಲ್ಲ. ಎರಡನೆಯದಾಗಿ, ಮತದಾರರ ಹೆಸರುಗಳನ್ನು ತೆಗೆಸಲು ಬಯಸುವ ಯಾರಾದರೂ ಈಗ ನಮೂನೆ 7 ಅನ್ನು ಭರ್ತಿ ಮಾಡಬೇಕಾಗುತ್ತದೆ. ಯಾವುದೇ ಮತದಾರರ ಹೆಸರನ್ನು ಅಳಿಸುವ ಮೊದಲು, ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಮೂಲಕ ಪರಿಶೀಲನೆ ನಡೆಸಲಾಗುವುದು. ಇದು ಮತದಾರರ ಪಟ್ಟಿಯಲ್ಲಿ ತಪ್ಪಾಗಿ ಹೆಸರು ಅಳಿಸುವಿಕೆಯನ್ನು ತಡೆಯುತ್ತದೆ ಎಂದು ನಾವು ನಂಬುತ್ತೇವೆ ಎಂದು ಅವರು ಹೇಳಿದ್ದಾರೆ.

‘ನಮಗೆ ದೊರೆತ ಇನ್ನೊಂದು ಭರವಸೆ ಏನೆಂದರೆ, ಒಬ್ಬ ವ್ಯಕ್ತಿಯು ಐದಕ್ಕಿಂತ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಲು ಅರ್ಜಿ ಸಲ್ಲಿಸಿದರೆ, ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಖುದ್ದಾಗಿ ಕ್ಷೇತ್ರಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ’ಎಂದು ಕೇಜ್ರಿವಾಲ್ ತಿಳಿಸಿದರು.

2025ರ ಆರಂಭದಲ್ಲಿ ದೆಹಲಿ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆಯ ಇದೆ. 2020ರ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ ಎಎಪಿ 62 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 8 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.