ADVERTISEMENT

ಕನ್ನಡಿಗ ಅಬ್ದುಲ್‌ ನಜೀರ್‌ ಸಹಿತ ಆರು ರಾಜ್ಯಪಾಲರ ನೇಮಕ

ರಾಷ್ಟ್ರಪತಿ ಮುರ್ಮು ಆದೇಶ: ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಆಂಧ್ರ ಪ್ರದೇಶಕ್ಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 21:45 IST
Last Updated 12 ಫೆಬ್ರುವರಿ 2023, 21:45 IST
ಎಸ್‌. ಅಬ್ದುಲ್‌ ನಜೀರ್‌
ಎಸ್‌. ಅಬ್ದುಲ್‌ ನಜೀರ್‌   

ನವದೆಹಲಿ: ಕನ್ನಡಿಗ ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸೈಯದ್‌ ಅಬ್ದುಲ್‌ ನಜೀರ್‌ ಸಹಿತ ಆರು ಮಂದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ರಾಜ್ಯಪಾಲರಾಗಿ ನೇಮಕ ಮಾಡಿದ್ದಾರೆ.

ಅಬ್ದುಲ್ ನಜೀರ್ ಅವರು ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ನೇಮಕ ಗೊಂಡಿದ್ದಾರೆ. ಉಳಿದಂತೆ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಕೈವಲ್ಯ ತ್ರಿವಿಕ್ರಮ ಪರ್‌ನಾಯಕ್‌ ಅವರನ್ನು ಅರುಣಾಚಲ ಪ್ರದೇಶಕ್ಕೆ, ಬಿಜೆಪಿ ಮುಖಂಡರಾದ ಲಕ್ಷ್ಮಣ ಪ್ರಸಾದ್‌ ಆಚಾರ್ಯ, ಸಿ.ಪಿ.ರಾಧಾಕೃಷ್ಣನ್‌, ಶಿವಪ್ರತಾಪ್‌ ಶುಕ್ಲಾ ಮತ್ತು ಗುಲಾಬ್‌ಚಂದ್‌ ಕಟಾರಿಯಾ ಅವರನ್ನು ಕ್ರಮವಾಗಿ ಸಿಕ್ಕಿಂ, ಜಾರ್ಖಂಡ್‌, ಹಿಮಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯ‍ಪಾಲರನ್ನಾಗಿ ನೇಮಕ ಮಾಡಲಾಗಿದೆ.

ಆಂಧ್ರ ಪ್ರದೇಶ ರಾಜ್ಯಪಾಲರಾಗಿದ್ದ ವಿಶ್ವಭೂಷಣ್‌ ಹರಿಚಂದನ್‌ ಅವರನ್ನು ಛತ್ತೀಸಗಢಕ್ಕೆ, ಜಾರ್ಖಂಡ್‌ ರಾಜ್ಯಪಾಲರಾಗಿದ್ದ ರಮೇಶ್‌ ಬೈಸ್‌ ಅವರನ್ನು ಮಹಾರಾಷ್ಟ್ರಕ್ಕೆ, ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ನಿವೃತ್ತ ಬ್ರಿಗೇಡಿಯರ್‌ ಬಿ.ಡಿ.ಮಿಶ್ರಾ ಅವರನ್ನು ಲಡಾಖ್‌ನ ಲೆಫ್ಟಿನೆಂಟ್‌ ಗವರ್ನರ್‌ ಆಗಿ ವರ್ಗಾಯಿಸಲಾಗಿದೆ.

ADVERTISEMENT

ಅನುಸೂಯಿಯಾ ಉಯಿಕೆ ಅವರನ್ನು ಛತ್ತೀಸಗಢದಿಂದ ಮಣಿಪುರಕ್ಕೆ, ಲಾ ಗಣೇಶನ್‌ ಅವರನ್ನು ಮಣಿಪುರದಿಂದ ನಾಗಾಲ್ಯಾಂಡ್‌ಗೆ, ಫಗು ಚೌಹಾಣ್‌ ಅವರನ್ನು ಬಿಹಾರದಿಂದ ಮೇಘಾಲಯಕ್ಕೆ ಮತ್ತು ರಾಜೇಂದ್ರ ವಿಶ್ವನಾಥ್‌ ಅರಳೇಕರ್‌ ಅವರನ್ನು ಹಿಮಾಚಲ ಪ್ರದೇಶದಿಂದ ಬಿಹಾರಕ್ಕೆ ವರ್ಗಾವಣೆ ಮಾಡಲಾಗಿದೆ.

ಆಕ್ಷೇಪ: ನ್ಯಾಯಮೂರ್ತಿ ಅಬ್ದುಲ್‌ ನಜೀರ್‌ ಅವರ ನೇಮಕಕ್ಕೆ ಕಾಂಗ್ರೆಸ್‌, ಸಿ‍ಪಿಎಂ ಸಹಿತ ವಿವಿಧ ರಾಜಕೀಯ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ರೀತಿಯ ನೇಮಕಗಳು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಬಹುದೊಡ್ಡ ಬೆದರಿಕೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ 65 ವರ್ಷದ ನಜೀರ್‌ ಅವರು 2017ರ ಫೆಬ್ರುವರಿ 17ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು. ಈ ವರ್ಷದ ಜನವರಿ 4ರಂದು ಅವರು ನಿವೃತ್ತರಾಗಿದ್ದರು.

ನಜೀರ್‌ ಅವರು ಹಲವು ಸಾಂವಿಧಾನಿಕ ‍ಪೀಠಗಳ ಭಾಗವಾಗಿದ್ದರು. ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದಿಗೆ ಸಂಬಂಧಿಸಿದ ವಿವಾದ ಕುರಿತು 2019ರಲ್ಲಿ ಸುಪ್ರೀಂ ಕೋರ್ಟ್‌ ಚಾರಿತ್ರಿಕ ತೀರ್ಪು ಪ್ರಕಟಿಸಿತ್ತು. ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ನ್ಯಾಯಪೀಠದಲ್ಲಿ ನಜೀರ್‌ ಅವರೂ ಇದ್ದರು. ತ್ರಿವಳಿ ತಲಾಖ್‌, ಖಾಸಗಿತನದ ಹಕ್ಕು ಕೂಡ ಮೂಲಭೂತ ಹಕ್ಕು, ದಾಖಲಾತಿ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಮರಾಠರಿಗೆ ಮೀಸಲಾತಿ ಕಲ್ಪಿಸಿ ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠಗಳಲ್ಲೂ ಅವರಿದ್ದರು.

ಕೋಶಿಯಾರಿ, ಮಾಥುರ್‌ ರಾಜೀನಾಮೆ

ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಹಾಗೂ ಲಡಾಖ್‌ನ ಲೆಫ್ಟಿನೆಂಟ್‌ ಗವರ್ನರ್‌ ಆರ್‌.ಕೆ.ಮಾಥುರ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ.

80 ವರ್ಷದ ಕೋಶಿಯಾರಿ ಅವರು ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರ್ಕಾರದ ಜೊತೆಗಿನ ಸಂಘರ್ಷದಿಂದಲೇ ಸದಾ ಸುದ್ದಿಯಲ್ಲಿದ್ದರು.

‘ಛತ್ರಪತಿ ಶಿವಾಜಿ ಮಹಾರಾಜ ಹಳೆಯ ಕಾಲದ ಐಕಾನ್’ ಎಂದು ಅವರು ಇತ್ತೀಚೆಗೆ ಹೇಳಿದ್ದರು. ಈ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಅವರನ್ನು ರಾಜ್ಯಪಾಲರ ಸ್ಥಾನದಿಂದ ಕೆಳಗಿಳಿಸುವಂತೆ ವಿರೋಧ ಪಕ್ಷಗಳ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಿದ್ದರು. ಅವರ ಹೇಳಿಕೆಯಿಂದ ಏಕನಾಥ ಶಿಂದೆ– ದೇವೇಂದ್ರ ಫಡಣವೀಸ್‌ ಅವರ ಸರ್ಕಾರವೂ ಮುಜುಗರಕ್ಕೀಡಾಗಿತ್ತು.

ಮಾಥುರ್‌ ಅವರು ಇತ್ತೀಚೆಗೆ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದ್ದರು. ಶಿಕ್ಷಣ ಸುಧಾರಕ ಸೋನಮ್‌ ವಾಂಗ್‌ಚುಕ್‌ ಅವರು ಮಾಥುರ್‌ ವಿರುದ್ಧ ಕಿಡಿಕಾರಿದ್ದರು.

ಇದೇ ಮೊದಲಲ್ಲ

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದವರು ರಾಜ್ಯಪಾಲರ ಹುದ್ದೆಗೆ ಏರಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೆಲವರು ಈ ಹುದ್ದೆಗೆ ನೇಮಕಗೊಂಡಿದ್ದರು.

ನಿವೃತ್ತ ನ್ಯಾಯಮೂರ್ತಿ ಎಸ್‌.ಫಜಲ್‌ ಅಲಿ ಅವರು ಒಡಿಶಾ (1952–54) ಮತ್ತು ಅಸ್ಸಾಂ (1956–59) ರಾಜ್ಯಪಾಲರಾಗಿ ಕೆಲಸ ಮಾಡಿದ್ದರು. ನಿವೃತ್ತ ನ್ಯಾಯಮೂರ್ತಿ ಫಾತಿಮಾ ಬೀವಿ ಅವರು 1997ರಲ್ಲಿ ತಮಿಳುನಾಡು ರಾಜ್ಯಪಾಲರಾಗಿ ನೇಮಕಗೊಂಡಿ
ದ್ದರು. ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಅವರು 2014ರ ಸೆಪ್ಟೆಂಬರ್‌ನಿಂದ 2019ರವರೆಗೆ ಕೇರಳ ರಾಜ್ಯಪಾಲ
ರಾಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.