ADVERTISEMENT

ರಾಷ್ಟ್ರಪತಿ ಚುನಾವಣೆ: ನೇರಳೆ ಬಣ್ಣದ ಶಾಯಿಯುಳ್ಳ ವಿಶೇಷ ಪೆನ್ ಬಳಕೆ

ಪಿಟಿಐ
Published 16 ಜೂನ್ 2022, 14:04 IST
Last Updated 16 ಜೂನ್ 2022, 14:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದ ಗೋಪ್ಯತೆ ರಕ್ಷಿಸಲು ಮತದಾರರಿಗೆ ವಿಶೇಷವಾಗಿ ರೂಪಿಸಿರುವ, ನೇರಳೆ ಬಣ್ಣದ ಶಾಯಿಯುಳ್ಳ ಪೆನ್ ಒದಗಿಸಬೇಕು’ ಎಂದು ಚುನಾವಣಾ ಆಯೋಗವು ಚುನಾವಣಾಧಿಕಾರಿಗಳಿಗೆ ಸೂಚಿಸಿದೆ.

ಗೋಪ್ಯತೆಯ ರಕ್ಷಣೆ ಮತ್ತು ಮತದಾರರ ಗುರುತು ಪತ್ತೆಯಾಗುವ ಸಾಧ್ಯತೆ ತಪ್ಪಿಸಲು ಪ್ರತಿಯೊಬ್ಬ ಮತದಾರರಿಗೆ ನೇರಳೆ ಶಾಯಿಯುಳ್ಳ ವಿಶೇಷ ಪೆನ್ ಒದಗಿಸಬೇಕು. ಅಗತ್ಯವಿರುವ ಸಂಖ್ಯೆಯಷ್ಟು ಪೆನ್‌ಗಳನ್ನು ಆಯೋಗವು ಚುನಾವಣಾಧಿಕಾರಿಗಳಿಗೆ ಒದಗಿಸಲಿದೆ. ಮತದಾರರು ಈ ಪೆನ್ ಬಳಸಿಯೇ ತಮ್ಮ ಪ್ರಾಶಸ್ತ್ಯದ ಅನುಸಾರ ಮತಚಲಾಯಿಸಬೇಕು ಎಂದು ಸೂಚಿಸಲಾಗಿದೆ.

ಉಲ್ಲೇಖಿತ ಪೆನ್ ಹೊರತುಪಡಿಸಿ, ಇತರೆ ಯಾವುದೇ ಪೆನ್ ಬಳಸಿ ಮತ ಚಲಾವಣೆ ಮಾಡಿದಲ್ಲಿ ಅದು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ನಿಯಮಗಳು 1974ರ ಅನ್ವಯ ಅಸಿಂಧುಗೊಳ್ಳಲಿದೆ ಎಂದುರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಅವರು ಈ ಸಂಬಂಧ ವಿವಿಧ ರಾಜ್ಯಗಳ ಚುನಾವಣಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ತಿನ ಉಭಯ ಸದನಗಳ ಸದಸ್ಯರು, ರಾಜ್ಯಗಳ ವಿಧಾನಸಭೆ ಹಾಗೂ ದೆಹಲಿ, ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳ ಚುನಾಯಿತ ಸದಸ್ಯರು ಮತದಾರರಾಗಿರುತ್ತಾರೆ. ಸಂಸತ್ತಿನ ಉಭಯ ಸದನಗಳಿಗೆ ನಾಮಕರಣಗೊಂಡ ಹಾಗೂ ರಾಜ್ಯಗಳ ವಿಧಾನಪರಿಷತ್ತುಗಳ ಸದಸ್ಯರಿಗೆ ಮತದಾನದ ಹಕ್ಕು ಇರುವುದಿಲ್ಲ.

ನೂತನ ರಾಷ್ಟ್ರಪತಿ ಆಯ್ಕೆಗೆ ಜುಲೈ 18ರಂದು ಚುನಾವಣೆ ನಡೆಯಲಿದ್ದು, ಮತಗಳ ಎಣಿಕೆ ಪ್ರಕ್ರಿಯೆ ರಾಷ್ಟ್ರ ರಾಜಧಾನಿಯಲ್ಲಿ ಜುಲೈ21 ರಂದು ನಡೆಯಲಿದೆ. ರಾಜಕೀಯ ಪಕ್ಷಗಳು ಈ ಚುನಾವಣೆಯಲ್ಲಿ ತನ್ನ ಸದಸ್ಯರಿಗೆ ವಿಪ್‌ ಜಾರಿ ಮಾಡಲು ಅವಕಾಶವಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.