ADVERTISEMENT

ಮಹಾರಾಷ್ಟ್ರದಲ್ಲಿ ಮೂರನೇ ಬಾರಿ ರಾಷ್ಟ್ರಪತಿ ಆಡಳಿತ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 1:57 IST
Last Updated 13 ನವೆಂಬರ್ 2019, 1:57 IST
ರಾಮನಾಥ್‌ ಕೋವಿಂದ್‌
ರಾಮನಾಥ್‌ ಕೋವಿಂದ್‌   

ಮುಂಬೈ: 1960ರಲ್ಲಿ ಮಹಾರಾಷ್ಟ್ರ ರಾಜ್ಯ ಸ್ಥಾಪನೆಯಾದ ಬಳಿಕ ಮೂರನೇ ಬಾರಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ.

ಮೊದಲ ಆಳ್ವಿಕೆ:ಮಹಾರಾಷ್ಟ್ರದಲ್ಲಿಮೊದಲ ಬಾರಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದ್ದು 17 ಫೆಬ್ರುವರಿ 1980ರಲ್ಲಿ. ಜೂನ್ 9ರವರೆಗೆ ಇದು ಜಾರಿಯಲ್ಲಿತ್ತು.ವಿವಾದಾತ್ಮಕ ಸಂದರ್ಭದಲ್ಲಿ 356ನೇ ವಿಧಿ ಜಾರಿಗೊಳಿಸಬೇಕಾಯಿತು.

1977ರ ಮಾರ್ಚ್‌ನಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷವು ಕಾಂಗ್ರೆಸ್‌ ಪಕ್ಷದ ನೇತೃತ್ವದ ಎಂಟು ರಾಜ್ಯ ಸರ್ಕಾರಗಳನ್ನು ಎರಡು ದಿನಗಳ ಅಂತರದಲ್ಲಿ ವಜಾಗೊಳಿಸಿತ್ತು. 1980ರಲ್ಲಿ ಅಧಿಕಾರಕ್ಕೆ ಬಂದು ಇದಕ್ಕೆ ಮುಯ್ಯಿ ತೀರಿಸಿಕೊಂಡ ಇಂದಿರಾಗಾಂಧಿ, ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರದಲ್ಲಿದ್ದ 9 ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದ್ದರು.

ಎರಡನೇ ಆಳ್ವಿಕೆ:2014ರ ಸೆಪ್ಟೆಂಬರ್‌ 28ನಿಂದ ಅಕ್ಟೋಬರ್ 31ರವರೆಗೆ ಎರಡನೇ ಬಾರಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವಿತ್ತು. ಸೀಟು ಹೊಂದಾಣಿಕೆ ಬಿಕ್ಕಟ್ಟಿನ ಕಾರಣ ಸರ್ಕಾರದಿಂದ ಎನ್‌ಸಿಪಿ ಹೊರಬಂದಿದ್ದರಿಂದ ಅಂದಿನ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ರಾಜೀನಾಮೆ ನೀಡಿದ್ದರು. ದೇವೇಂದ್ರ ಫಡಣವೀಸ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಷ್ಟ್ರಪತಿ ಆಡಳಿತ ಕೊನೆಗೊಂಡಿತು.

ವಿಂಧ್ಯಪ್ರದೇಶದಿಂದ ಆರಂಭ:1949ರಲ್ಲಿವಿಂಧ್ಯಪ್ರದೇಶದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿ ಆಡಳಿತ ಜಾರಿಯಾಗಿತ್ತು. 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯ ಬಳಿಕ ಆಡಳಿತ ಕೊನೆಗೊಂಡಿತು. ರಾಜ್ಯಗಳ ಪುನರ್‌ವಿಂಗಡಣೆಯಿಂದ ವಿಂಧ್ಯಪ್ರದೇಶವು 1956ರಲ್ಲಿ ಮಧ್ಯಪ್ರದೇಶದಲ್ಲಿ ವಿಲೀನವಾಯಿತು. ಸಂವಿಧಾನ ಜಾರಿಯಾದ ಬಳಿಕ 1951ರ ಜೂನ್ 20ರಂದು ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಡಳಿತ ಶುರುವಾಯಿತ್ತು. \

ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆಯ ನೆನಪು
ಮಹಾರಾಷ್ಟ್ರದಲ್ಲಿ ಜಾರಿಯಾಗಿರುವರಾಷ್ಟ್ರಪತಿ ಆಡಳಿತವು2005ರಲ್ಲಿ ಬಿಹಾರದಲ್ಲಿ ಜಾರಿಯಾಗಿದ್ದ ರಾಷ್ಟ್ರಪತಿ ಆಡಳಿತವನ್ನು ನೆನಪಿಸುತ್ತದೆ. ರಾಜ್ಯಪಾಲರಾಗಿದ್ದ ಬೂಟಾ ಸಿಂಗ್ ಅವರು ರಾಷ್ಟ್ರಪತಿ ಆಡಳಿತ ಹೇರುವಂತೆ ಡಾ. ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಅತಂತ್ರ ವಿಧಾನಸಭೆ ನಿರ್ಮಾಣವಾಗಿದ್ದು, ಸ್ಥಿರ ಸರ್ಕಾರ ರಚನೆಯಾಗುವ ಸಾಧ್ಯತೆಗಳು ಕಡಿಮೆ ಎಂದು ಅವರು ಕಾರಣ ನೀಡಿದ್ದರು. ಮಾರ್ಚ್ 2005ರಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು.‌

ಶಾಸಕರ ಖರೀದಿ ಸಾಧ್ಯತೆಯಿದ್ದು, ವಿಧಾನಸಭೆ ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸುವಂತೆ ರಾಜ್ಯಪಾಲರು ಮೇ 21ರಂದು ಕೇಂದ್ರಕ್ಕೆ ಶಿಫಾರಸು ಮಾಡಿದರು. ಮೇ 22ರ ಮಧ್ಯರಾತ್ರಿ ಸಭೆ ಸೇರಿದ ಕೇಂದ್ರ ಸಂಪುಟ ಸಭೆಯು ರಾಜ್ಯಪಾಲರ ವರದಿ ಒಪ್ಪಿಕೊಂಡು, ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಿತು. ರಷ್ಯಾ ಪ್ರವಾಸದಲ್ಲಿದ್ದ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಅಲ್ಲಿಂದಲೇ ಅಂಕಿತ ಹಾಕಿದರು.

ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್, ರಾಜ್ಯಪಾಲರಿಗೆ ಛೀಮಾರಿ ಹಾಕಿತ್ತು.ಶಿಫಾರಸು ದುರುದ್ದೇಶದಿಂದ ಕೂಡಿದೆ ಎಂದು ಅಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ವೈ.ಕೆ. ಸಬರ್‌ವಾಲ್ ಅವರು 2005ರಅಕ್ಟೋಬರ್7ರಂದು ತೀರ್ಪು ನೀಡಿದ್ದರು.ಈ ಬೆಳವಣಿಗೆಯಿಂದ ಬೂಟಾ ಸಿಂಗ್ ಅವರು ರಾಜೀನಾಮೆ ನೀಡಿದ್ದರು. ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು.

*
ಹೆಚ್ಚು ಬಾರಿ ರಾಷ್ಟ್ರಪತಿ ಆಳ್ವಿಕೆ
ಮಣಿಪುರ: 10
ಉತ್ತರ ಪ್ರದೇಶ: 9
ಪಂಜಾಬ್: 8
ಬಿಹಾರ: 8
ಕರ್ನಾಟಕ: 6
ಒಡಿಶಾ: 6
ಪುದುಚೇರಿ: 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.