ADVERTISEMENT

ಸಂಸತ್ತಿನ ಜಂಟಿ ಅಧಿವೇಶನ: ರಾಷ್ಟ್ರಪತಿ ಭಾಷಣಕ್ಕೆ ವಿರೋಧ ಪಕ್ಷಗಳ ಟೀಕೆ

ಪಿಟಿಐ
Published 31 ಜನವರಿ 2023, 14:25 IST
Last Updated 31 ಜನವರಿ 2023, 14:25 IST
ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು   

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಸಂಸತ್‌ನಲ್ಲಿ ಮಾಡಿರುವ ಭಾಷಣಕ್ಕೆ ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸಿದ್ದು, ‘ಭಾಷಣವು ಆಡಳಿತಾರೂಢ ಬಿಜೆಪಿಯ 2024ರ ಪ್ರಣಾಳಿಕೆಯ ಮೊದಲ ಅಧ್ಯಾಯ’ ಎಂದು ಲೇವಡಿ ಮಾಡಿವೆ.

ತೈಲ ದರ ಏರಿಕೆ ನಿಯಂತ್ರಣ, ಕೋಮು ಸೌಹಾರ್ದತೆ ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳು ಭಾಷಣದಲ್ಲಿ ಕಾಣೆಯಾಗಿದ್ದವು ಎಂದೂ ಹೇಳಿವೆ.

‘ಸರ್ಕಾರದ ಹೇಳಿಕೆಯು ರಾಷ್ಟ್ರಪತಿಗಳ ಮೂಲಕ ಹೊರಬಂದಿದೆ. ಅದರಲ್ಲಿ ಹೊಸತೇನೂ ಇಲ್ಲ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ADVERTISEMENT

‘ಸರ್ಕಾರ ಹೇಳಿರುವಂತೆ ದೇಶವು ತುಂಬಾ ಪ್ರಗತಿ ಸಾಧಿಸಿದ್ದರೆ, ನಿರುದ್ಯೋಗ, ಹಣದುಬ್ಬರ ಮೊದಲಾದವುಗಳ ಪರಿಣಾಮವಾಗಿ ಬಡವರು ಯಾಕೆ ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದೂ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮರುನಾಮಕರಣ ಮಾಡಿರುವ ಯೋಜನೆಗಳು ಬಡವರಿಗೆ ತಲುಪುತ್ತಿಲ್ಲ ಎಂದೂ ಖರ್ಗೆ ಅವರು ಆರೋಪಿಸಿದ್ದಾರೆ.

‘ರಾಷ್ಟ್ರಪತಿಗಳ ಭಾಷಣವು ಕೇಂದ್ರ ಸರ್ಕಾರದಿಂದ ಬರೆಯಲ್ಪಟ್ಟಿದ್ದರೂ ಅದರಲ್ಲಿ ಪ್ರಮುಖ ವಿಚಾರಗಳ ಪ್ರಸ್ತಾಪವೇ ಇರಲಿಲ್ಲ’ ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಿಯನ್ ಹೇಳಿದ್ದಾರೆ.

‘ಮಹಿಳೆಯರ, ಯುವಕರ, ದಲಿತ ಮತ್ತು ಬುಡಕಟ್ಟು ಜನರ ಸಬಲೀಕರಣವು ಕೇವಲ ಕಾಗದದಲ್ಲಷ್ಟೇ ಇದೆ’ ಎಂದು ಸಿಪಿಐ ಸಂಸದ ಬಿನೋಯ್‌ ವಿಶ್ವಂ ಟ್ವೀಟ್‌ ಮಾಡಿದ್ದಾರೆ.

ಸಂಸತ್‌ನಲ್ಲಿ ಮಾಡಿರುವ ತಮ್ಮ ಮೊದಲ ಭಾಷಣದಲ್ಲಿ ಮುರ್ಮು ಅವರು, ‘ದೇಶವು ಸ್ಥಿರ, ನಿರ್ಭೀತ, ನಿರ್ಣಾಯಕ ಸರ್ಕಾರವನ್ನು ಹೊಂದಿದೆ. ಮತ್ತು ಅದು ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ವರ್ಗದ ಜನರಿಗಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದ್ದರು.

ಬದಲಾವಣೆಯ ಚಿತ್ರಣ ನೀಡಿದ ಭಾಷಣ: ‘ದ್ರೌಪದಿ ಮುರ್ಮು ಅವರ ಭಾಷಣವು ವಿಸ್ತಾರವಾದ ವಿಷಯಗಳನ್ನು ಹೊಂದಿತ್ತು ಮತ್ತು ವಿವಿಧ ಕ್ಷೇತ್ರಗಳಲ್ಲಾದ ಮಹತ್ವದ ಬದಲಾವಣೆಗಳ ಆಳವಾದ ಚಿತ್ರಣವನ್ನು ನೀಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.

‘ಸಾಮಾನ್ಯ ಜನರನ್ನು ಹೇಗೆ ಸಬಲೀಕರಣ ಮಾಡಲಾಗಿದೆ’ ಎಂಬುದನ್ನು ಭಾಷಣವು ಒತ್ತಿ ಹೇಳಿದೆ ಎಂದೂ ಟ್ವೀಟ್‌ ಮಾಡಿದ್ದಾರೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.