ADVERTISEMENT

ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಭಾಗಿ

ಭಾರತೀಯ ಸಮುದಾಯದಿಂದಲೂ ಆತ್ಮೀಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2023, 16:27 IST
Last Updated 22 ಆಗಸ್ಟ್ 2023, 16:27 IST
ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಮಂಗಳವಾರ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು –ಪಿಟಿಐ ಚಿತ್ರ
ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಮಂಗಳವಾರ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು –ಪಿಟಿಐ ಚಿತ್ರ   

ಜೋಹಾನಸ್‌ಬರ್ಗ್‌: ‘ಬ್ರಿಕ್ಸ್‌’ ಸದಸ್ಯ ರಾಷ್ಟ್ರಗಳ 15ನೇ ಶೃಂಗಸಭೆಯಲ್ಲಿ ಭಾಗವಹಿಸಲು ಮಂಗಳವಾರ ಇಲ್ಲಿಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ, ‘ವಿಶ್ವದ ಪ್ರಮುಖ ನಾಯಕರ ಜೊತೆಗೆ ಚರ್ಚಿಸಲು ಉತ್ಸುಕನಾಗಿದ್ದೇನೆ’ ಎಂದು ಹೇಳಿದರು.

ದಕ್ಷಿಣ ಆಫ್ರಿಕಾದ ಉಪಾಧ್ಯಕ್ಷ ಪಾಲ್ ಮಷಟೈಲ್ ಅವರು ಪ್ರಧಾನಿ ಮೋದಿ ಅವರನ್ನು ಇಲ್ಲಿನ ವಾಟರ್‌ಕ್ಲೂಫ್‌ ವಾಯುನೆಲೆಯಲ್ಲಿ ಬರಮಾಡಿಕೊಂಡರು. ಪ್ರಧಾನಿಗೆ ಸಾಂಪ್ರದಾಯಿಕ ಗೌರವ ನೀಡಲಾಯಿತು. 

ಈ ಸಂಬಂಧ ‘ಎಕ್ಸ್‌’ ಜಾಲತಾಣದಲ್ಲಿ ಸಂದೇಶವನ್ನು ಪೋಸ್ಟ್ ಮಾಡಿರುವ ಪ್ರಧಾನಿ, ‘ಶೃಂಗಸಭೆಯಲ್ಲಿ ವಿಶ್ವದ ಪ್ರಮುಖ ನಾಯಕರ ಜೊತೆಗೆ ಚರ್ಚೆ, ಸಭೆ ನಡೆಸುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ತಿಳಿಸಿದ್ದಾರೆ. 

ADVERTISEMENT

ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಫೋಸಾ ಆಹ್ವಾನದ ಮೇರೆಗೆ ಮೋದಿ ಆಗಸ್ಟ್‌ 24ರವರೆಗೆ ಪ್ರವಾಸದಲ್ಲಿದ್ದಾರೆ. ಬ್ರೆಜಿಲ್‌, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಸದಸ್ಯತ್ವವಿರುವ ಈ ಶೃಂಗಸಭೆಯನ್ನು ದಕ್ಷಿಣ ಆಫ್ರಿಕಾ 2019ರಿಂದ ಆಯೋಜಿಸುತ್ತಿದೆ.

ಜೋಹಾನಸ್‌ಬರ್ಗ್‌ಗೆ ತೆರಳುವ ಮುನ್ನ ನವದೆಹಲಿಯಲ್ಲಿ ಹೇಳಿಕೆ ನೀಡಿದ್ದ ಪ್ರಧಾನಿ, ‘ಅಭಿವೃದ್ಧಿ ಕಾರ್ಯಗಳು, ಸುಧಾರಣಾ ಕ್ರಮಗಳು ಒಳಗೊಂಡಂತೆ ಜಗತ್ತಿನ ದಕ್ಷಿಣ ಭಾಗಕ್ಕೆ ಅನ್ವಯಿಸುವ ವಿವಿಧ ವಿಷಯಗಳ ಚರ್ಚೆಗೆ ಬ್ರಿಕ್ಸ್ ವೇದಿಕೆಯಾಗಿದೆ’ ಎಂದು ಹೇಳಿದ್ದರು.

‘ಈ ಶೃಂಗವು ವಿಶ್ವದ ಶೇ 41ರಷ್ಟು ಜನಸಂಖ್ಯೆ ಹಾಗೂ ಶೇ 16ರಷ್ಟು ಜಿಡಿಪಿ ಅನ್ನು ಹೊಂದಿರುವ ಜಗತ್ತಿನ ಐದು ಅತಿದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಂದೇ ವೇದಿಕೆಯಡಿ ತರಲಿದೆ’ ಎಂದು ಉಲ್ಲೇಖಿಸಿದ್ದರು. 

ಆಫ್ರಿಕಾ ಮತ್ತು ಮಧ್ಯ ಏಷ್ಯಾದ 20ಕ್ಕೂ ಹೆಚ್ಚು ರಾಷ್ಟ್ರಗಳ ಪ್ರಮುಖರಿಗೂ ಈ ಶೃಂಗಸಭೆಗೆ ಆಹ್ವಾನ ನೀಡಲಾಗಿದೆ. ಈ ಪೈಕಿ ಹೆಚ್ಚಿನ ರಾಷ್ಟ್ರಗಳು ಬ್ರಿಕ್ಸ್‌ ಸದಸ್ಯತ್ವವನ್ನು ಕೋರಿ ಅರ್ಜಿ ಸಲ್ಲಿಸಿವೆ. ಈ ವಿಷಯವೂ ಶೃಂಗಸಭೆಯಲ್ಲಿ ಚರ್ಚೆಗೆ ಬರಲಿದೆ.

ಅಂತರರಾಷ್ಟ್ರೀಯ ಕ್ರಿಮಿನಲ್‌ ಕೋರ್ಟ್‌ನ (ಐಸಿಸಿ) ವಾರಂಟ್‌ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾಗೆ ಬಂದಲ್ಲಿ ಬಂಧನದ ಸಾಧ್ಯತೆ ಇರುವ ಕಾರಣ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ವರ್ಚುವಲ್‌ ವೇದಿಕೆಯಡಿ ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಶೃಂಗಸಭೆಯಲ್ಲದೆ, ವಿವಿಧ ರಾಷ್ಟ್ರಗಳ ಮುಖಂಡರ ಜೊತೆಗೂ ದ್ವಿಪಕ್ಷೀಯ ಮಾತುಕತೆ ನಡೆಸಲು ನಾನು ಉತ್ಸುಕನಾಗಿದ್ದೇನೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಆಗಸ್ಟ್ 25ರಂದು ಪ್ರಧಾನಿ ಅವರು ಗ್ರೀಸ್‌ಗೆ ತೆರಳಲಿದ್ದಾರೆ. ಈ ಮೂಲಕ 40 ವರ್ಷದ ತರುವಾಯ ಗ್ರೀಸ್‌ಗೆ ಭೇಟಿ ನೀಡಿದ ಭಾರತದ ಪ್ರಧಾನಿ ಎಂಬ ಹಿರಿಮೆಗೂ ಅವರು ಪಾತ್ರರಾಗಲಿದ್ದಾರೆ.

ಭಾರತೀಯ ಸಮುದಾಯದಿಂದ ಸ್ವಾಗತ

ಬ್ರಿಕ್ಸ್‌ ಶೃಂಗಸಭೆಗೆ ಆಗಮಿಸಿರುವ ಪ್ರಧಾನಿ ಮೋದಿ ಅವರಿಗೆ ಇಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಸದಸ್ಯರು ಹಾಗೂ ವಿವಿಧ ಸಂಘಟನೆಯವರು ಸ್ವಾಗತ ಕೋರಿದರು.

ಪ್ರಿಟೋರಿಯ ಹಿಂದೂ ಸೇವಾ ಸಮಾಜ ಮತ್ತು ಬ್ಯಾಪ್ಸ್ ಸ್ವಾಮಿನಾರಾಯಣ್‌ ಸಂಘಟನೆಯ ಸ್ಥಳೀಯ ಘಟಕದ ಕಾರ್ಯಕರ್ತರು ಸ್ವಾಗತಿಸಿದರು. ತ್ರಿವರ್ಣಧ್ವಜ ಹಿಡಿದಿದ್ದ ಭಾರತೀಯ ಸಮುದಾಯದವರು ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದರು.

ಇಬ್ಬರು ಮಹಿಳೆಯರು ಪ್ರಧಾನಿಗೆ ರಾಖಿ ಕಟ್ಟಿದರು. ಬಳಿಕ ಶೃಂಗಸಭೆ ಆಯೋಜಿಸಿರುವ ಸ್ಯಾಂಡ್‌ಟನ್‌ ಸನ್‌ ಹೋಟೆಲ್‌ಗೆ ತೆರಳಿದ ಪ್ರಧಾನಿ ಅಲ್ಲಿ, ಭಾರತೀಯ ಸಮುದಾಯದ ಹಾಗೂ ಮತ್ತು ಸ್ಥಳೀಯ ಪ್ರಮುಖರನ್ನು ಭೇಟಿಯಾಗಿ ಚರ್ಚಿಸಿದರು.

ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ವಾಮಿನಾರಾಯಣ ಮಂದಿರದ ಮಾದರಿಯನ್ನು ಅವರು ವೀಕ್ಷಿಸಿದರು. 2017ರಿಂದಲೂ ಮಂದಿರ  ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. 

ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಭಾರತೀಯ ಸಮುದಾಯದವರು ಸ್ವಾಗತ ಕೋರಿದರು –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.