ADVERTISEMENT

ನಾಳೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 11:55 IST
Last Updated 26 ಏಪ್ರಿಲ್ 2020, 11:55 IST
   

ನವದೆಹಲಿ: ಕೊರೊನಾ ವೈರಸ್‌ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಲಾಕ್‌ಡೌನ್‌ ಪರಾಮರ್ಶೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ (ಏ.27) ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ನಾಳೆ ಬೆಳಗ್ಗೆ ಈ ಸಭೆ ನಡೆಯಲಿದ್ದು ಎಲ್ಲರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೊರೊನಾ ವೈರಸ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳು, ಇನ್ನು ಮುಂದೆ ಕೈಗೊಳ್ಳಬೇಕಾದ ಕ್ರಮಗಳು, ಲಾಕ್‌ಡೌನ್‌ ಸಾಧಕ ಬಾಧಗಳನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ.

ಲಾಕ್‌ಡೌನ್‌ ಜಾರಿಯಾದ ಬಳಿಕ ಪ್ರಧಾನಿ ಮೋದಿ ಅವರು, ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸುತ್ತಿರುವ ಮೂರನೇ ಸಭೆ ಇದಾಗಿದೆ.

ADVERTISEMENT

ಈ ಸಭೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಿಗೆ ಸಿಗಬೇಕಾದ ಅನುದಾನಗಳ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆಗಳಿವೆ. ಈಗಾಗಲೇ ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರದಿಂದ ಅನುದಾನ, ಜಿಎಸ್‌ಟಿ ಪಾಲು ಕೇಳಿದ್ದಾರೆ. ಅನುದಾನ, ಪ್ಯಾಕೇಜ್‌ ಇಲ್ಲದೇ ಕೊವಿಡ್‌ ವಿರುದ್ಧದ ಹೋರಾಟ ಸಫಲವಾಗದು ಎಂದು ಕಾಂಗ್ರೆಸ್‌ ಮುಖ್ಯಮಂತ್ರಿಗಳು ಆಗ್ರಹಿಸಿದ್ದಾರೆ.

ಇನ್ನೊಂದೆಡೆ, ವ್ಯಾಪಕ ಲಾಕ್‌ಡೌನ್‌ನಿಂದಾಗಿ ವಾಣಿಜ್ಯ ಚಟುವಟಿಕೆಗಳು ನಡೆಯದೇ ಎಲ್ಲ ರಾಜ್ಯಗಳೂ ನಷ್ಟಕ್ಕೆ ಸಿಲುಕಿವೆ. ಹೀಗಾಗಿ ರಾಜ್ಯಗಳು ಲಾಕ್‌ಡೌನ್‌ ಜಾರಿ ವಿಧಾನದ ಬಗ್ಗೆ ಆಕ್ಷೇಪಗಳನ್ನೆತ್ತುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿರುವ ಪ್ರದೇಶ, ಜಿಲ್ಲೆಗಳನ್ನು ಹೊರತುಪಡಿಸಿ, ಬೇರೆ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ತೆರವು ಮಾಡುವಂತೆಯೂ ಒತ್ತಾಯಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈಗಾಗಲೇ ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಇದೇ ರೀತಿಯಾಗಿ, ತಮಗೂ ಅವಕಾಶ ನೀಡಬೇಕು ಎಂದು ರಾಜ್ಯಗಳು ಕೇಳುವ ಸಾಧ್ಯತೆಗಳಿವೆ.

ರಾಜ್ಯಗಳನ್ನು ಹೊಗಳಿದ ಮೋದಿ

ಸಿಎಂಗಳ ಜೊತೆಗಿನ ಸಭೆಗೂ ಒಂದು ದಿನ ಮೊದಲು ಭಾನುವಾರ ರೆಡಿಯೋ ಕಾರ್ಯಕ್ರಮ ‘ಮನ್‌ ಕಿ ಬಾತ್‌’ನಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಕೊರೊನಾ ವೈರಸ್‌ ವಿರುದ್ಧ ದೇಶವು ಎಲ್ಲ ರಾಜ್ಯಗಳ ನೆರವಿನೊಂದಿಗೆ ಹೋರಾಡುತ್ತಿದೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ರಾಜ್ಯಗಳ ಪಾತ್ರವನ್ನು ನಾನು ಪ್ರಶಂಸಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.