ADVERTISEMENT

ನರೇಂದ್ರ ಮೋದಿ ಅಂಬಾನಿ ತೊಡೆಯ ಮೇಲೆ ಕುಳಿತಿದ್ದಾರೆ: ನವಜೋತ್ ಸಿಂಗ್‌ ಸಿಧು

ಏಜೆನ್ಸೀಸ್
Published 2 ಡಿಸೆಂಬರ್ 2018, 11:10 IST
Last Updated 2 ಡಿಸೆಂಬರ್ 2018, 11:10 IST
ನವಜೋತ್‌ ಸಿಂಗ್ ಸಿಧು
ನವಜೋತ್‌ ಸಿಂಗ್ ಸಿಧು   

ಕೋಟಾ (ರಾಜಸ್ತಾನ): ‘ಭಾರತೀಯ ಜನತಾ ಪಕ್ಷ ದೇಶಕ್ಕೆ ಮೂರು ಮೋದಿಯರನ್ನು ನೀಡಿದೆ. ನೀರವ್‌ ಮೋದಿ, ಲಲಿತ್‌ ಮೋದಿ ಹಾಗೂ ಮತ್ತೊಬ್ಬರು ಅಂಬಾನಿಯ ತೊಡೆಯ ಮೇಲೆ ಕುಳಿತಿರುವ ನರೇಂದ್ರ ಮೋದಿ’ ಎಂದು ಪಂಜಾಬ್‌ನ ಸಚಿವ ನವಜೋತ್‌ ಸಿಂಗ್ ಸಿಧು ಪ್ರಧಾನಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.

ರಾಮ್‌ಗಂಜ್‌ ಮಂಡಿಯಲ್ಲಿ ಆಯೋಜಿಸಿದ್ದ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್‌ ನಮಗೆ ನಾಲ್ಕು ಗಾಂಧಿಯರನ್ನು ನೀಡಿದೆ. ರಾಜೀವ್‌ ಗಾಂಧಿ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ. ಆದರೆ, ಬಿಜೆಪಿ ಮೂರು ಮೋದಿಯರನ್ನು ನಮಗೆ ನೀಡಿದೆ’ ಎಂದು ಹೇಳಿದರು.

’ಬ್ರಿಟೀಷರ ಕಪಿಮುಷ್ಠಿಯಲ್ಲಿದ್ದ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್‌ ಪಕ್ಷ. ಇತಿಹಾಸವನ್ನು ನೀವು ಪ್ರಶ್ನಿಸಲು ಸಾಧ್ಯವಿಲ್ಲ. ಜವಾಹರ್‌ಲಾಲ್‌ ನೆಹರು, ಅಬ್ದುಲ್‌ ಕಲಾಂ ಆಜಾದ್‌ ಮತ್ತು ಸರ್ದಾರ್‌ ಪಟೇಲರಂತ ನಾಯಕರಿಂದಸ್ವಾತಂತ್ರ್ಯದ ಕನಸು ನನಸಾಯಿತು. ಆದರೆ, ಈಗ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಗೂಂಡಗಳು ಪ್ರಜಾಪ್ರಭುತ್ವದ ಚುಕ್ಕಾಣಿ ಹಿಡಿದಿದ್ದಾರೆ’ ಎಂದರು.

ADVERTISEMENT

ರೈತರು ಮತ್ತು ಸಾಲಾಮನ್ನ ಯೋಜನೆಯ ಬಗ್ಗೆ ಮಾತನಾಡಿದ ಸಿಧು, ‘ಕಾಂಗ್ರೆಸ್‌ಗೆ ರೈತರು ಟರ್ಬನ್‌ನಂತೆ (ಶಿರಸ್ತ್ರಾಣ). ಅವರು ನಮ್ಮ ಹೆಮ್ಮೆ. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ರೈತರಿಗಾಗಿ ಯಾವ ಅನುಕೂಲಗಳನ್ನು ಕಲ್ಪಿಸಿಲ್ಲ ಎಂಬ ಸತ್ಯ ಕೇಳಿ ನನಗೆ ಬೇಸರವಾಗಿದೆ. ನಮ್ಮ ರೈತರು 38 ಲಕ್ಷ ಮೆಟ್ರಿಕ್‌ ಟನ್‌ ಧಾನ್ಯಗಳನ್ನು ಬೆಳೆದಿದ್ದಾರೆ. ಆದರೆ, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಕನಿಷ್ಟ ಬೆಂಬಲಬೆಲೆ ನೀಡಿ ಕೇವಲ 4 ಲಕ್ಷ ಟನ್‌ ಖರೀದಿಸಿದ್ದಾರೆ. ಉಳಿದ ಧಾನ್ಯಗಳು ಮಧ್ಯವರ್ತಿಗಳ ಪಾಲಾಗಿದೆ’ ಎಂದು ಟೀಕಿಸಿದರು.

‘ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರನ್ನು ಸಾಲದಿಂದ ಮುಕ್ತಗೊಳಿಸುವೆ ಹಾಗೂ 24 ತಾಸು ವಿದ್ಯುತ್ ಪೂರೈಸಲಾಗುತ್ತದೆ. ನಮ್ಮ ಸರ್ಕಾರ ರಚನೆಯಾಗುತ್ತಿದ್ದಂತೆ ರೈತರ ಎಲ್ಲಾ ಸಂಕಷ್ಟುಗಳು ಪರಿಹಾರಗೊಳ್ಳುತ್ತವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.