ADVERTISEMENT

ಮೇಕ್‌ ಇನ್‌ ಇಂಡಿಯಾಕ್ಕೆ ದಕ್ಷಿಣ ಕೊರಿಯಾ ಪ್ರಮುಖ ಪಾಲುದಾರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 12:42 IST
Last Updated 21 ಫೆಬ್ರುವರಿ 2019, 12:42 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಳಗಿನ ಜಾವ ದಕ್ಷಿಣ ಕೊರಿಯಾದ ಸಿಯೋಲ್‌ ತಲುಪಿದ್ದಾರೆ. ಚರ್ಚೆಗೆ ಪ್ರಧಾನಿ ಮೋದಿ ಎರಡು ದಿನಗಳ ಭೇಟಿಯಲ್ಲಿ ಹಲವು ಕ್ಷೇತ್ರಗಳಲ್ಲಿನ ಸಹಕಾರ ಒಪ್ಪಂದಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ದಕ್ಷಿಣ ಕೊರಿಯಾ ಜತೆಗಿನ ರಾಜತಾಂತ್ರಿಕ ಸಂಬಂಧ ವೃದ್ಧಿ ಹಾಗೂ ತಾಂತ್ರಿಕ ಕುಶಲತೆ ಪಾಲುದಾರಿಕೆ ಬಲಗೊಳಿಸುವ ನಿಟ್ಟಿನಲ್ಲಿ ಈ ಭೇಟಿ ಸಹಕಾರಿಯಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಅಭಿಪ್ರಾಯ ಪಟ್ಟಿದ್ದಾರೆ.

ಮೇಕ್‌ ಇನ್‌ ಇಂಡಿಯಾದಂತಹ ಕಾರ್ಯಕ್ರಮಗಳಲ್ಲಿ ದಕ್ಷಿಣ ಕೊರಿಯಾ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಉಭಯ ರಾಷ್ಟ್ರಗಳು ಪ್ರಾದೇಶಿಕ ಹಾಗೂ ಜಾಗತಿಕ ಶಾಂತಿಗಾಗಿ ಯೋಜನೆಗಳು, ಮೌಲ್ಯಗಳನ್ನು ಹಂಚಿಕೊಳ್ಳುತ್ತಿವೆ ಎಂದು ಪ್ರಧಾನಿ ಮೋದಿ ದಕ್ಷಿಣ ಕೊರಿಯಾ ಭೇಟಿಗೂ ಮುನ್ನ ಬಣ್ಣಿಸಿದ್ದರು.

ADVERTISEMENT

ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ ಇನ್‌ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಬುಧವಾರ ದಕ್ಷಿಣ ಕೊರಿಯಾ ಪ್ರವಾಸ ಕೈಗೊಂಡರು. ಎರಡನೇ ಬಾರಿಗೆ ಮೋದಿ ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದು, ಅಧ್ಯಕ್ಷ ಮೂನ್‌ ಜೇ ಇನ್‌ ಜತೆಗೆ ನಡೆಯುತ್ತಿರುವ ಎರಡನೇ ಸಭೆಯಾಗಿದೆ.

ಪ್ರವಾಸದ ಕುರಿತು ‘ನಾವು ನಮ್ಮ ಸಂಬಂಧಗಳಿಗೆ ಬದ್ಧರಾಗಿದ್ದೇವೆ’ ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದರು.

ಆರ್ಥಿಕ ಮಾರುಕಟ್ಟೆಯ ಜತೆಗಾರನಾಗಿರುವ ದಕ್ಷಿಣ ಕೊರಿಯಾ ’ಮೇಕ್‌ ಇನ್ ಇಂಡಿಯಾ’, ’ಸ್ಟಾರ್ಟ್‌ ಅಪ್‌ ಇಂಡಿಯಾ’ ಹಾಗೂ ’ಕ್ಲೀನ್‌ ಇಂಡಿಯಾ’ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ ಎಂದಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ಸಹಯೋಗ ಉತ್ತೇಜನಕಾರಿಯಾಗಿದೆ. ಮೂಲ ವಿಜ್ಞಾನದಿಂದ ಉನ್ನತ ಅಧ್ಯಾಯನಗಳಲ್ಲಿ ಜಂಟಿ ಸಂಶೋಧನೆಗಳು ನಡೆಯುತ್ತಿವೆ. ನಮ್ಮ ಜನರಿಂದ ಜನರ ನಡುವಿನ ವಿನಿಮಯಗಳು, ಒಪ್ಪಂದಗಳು ಸ್ನೇಹವನ್ನು ಗಟ್ಟಿಗೊಳಿಸಿದೆ. ಅಯೋಧ್ಯೆಯಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಪ್ರತಿನಿಧಿಯಾಗಿ ದೇಶದ ’ಪ್ರಥಮ ಮಹಿಳೆ’ಯನ್ನು ಕಳುಹಿಸುವ ಮೂನ್ ಅವರ ನಿರ್ಧಾರ ಮನತುಂಬಿತು ಎಂದು ಪ್ರಧಾನಿ ಮೋದಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.