ADVERTISEMENT

ಜೋಶಿಮಠಕ್ಕೆ ನೆರವು ನೀಡುವುದಾಗಿ ಪ್ರಧಾನಿ ಮೋದಿ ಭರವಸೆ: ಸಿಎಂ ಧಾಮಿ

ಪಿಟಿಐ
Published 8 ಜನವರಿ 2023, 10:51 IST
Last Updated 8 ಜನವರಿ 2023, 10:51 IST
   

ಡೆಹರಾಡೂನ್: ಜೋಶಿಮಠ ಪಟ್ಟಣದಲ್ಲಿ ಅಪಾಯಕಾರಿ ಮಟ್ಟದಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಆತಂಕದಲ್ಲಿರುವ ಸಂತ್ರಸ್ತರಿಗೆ ಅಗತ್ಯ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ‌ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಹೇಳಿದರು.

ತಮ್ಮೊಂದಿಗೆ ದೂರವಾಣಿ ಸಂಭಾಷಣೆ ನಡೆಸಿರುವ ಪ್ರಧಾನಿ ಮೋದಿ, ಬಿರುಕು ಬಿಟ್ಟ ಸ್ಥಳದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ತುರ್ತು ಕ್ರಮಗಳ ಕುರಿತು ವಿಚಾರಿಸಿದ್ದಾರೆ‌ ಎಂದು ಅವರು ತಿಳಿಸಿದರು.

ಜೋಶಿಮಠದಲ್ಲಿ ಉದ್ಭವವಾಗಿರುವ ಪರಿಸ್ಥಿತಿ, ಆ ಪ್ರದೇಶದ ಜನರ ಪುನರ್ವಸತಿ ಮತ್ತು ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಧಾನಮಂತ್ರಿಯವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ಜೋಶಿಮಠವನ್ನು ಉಳಿಸಲು ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಧಾಮಿ ಹೇಳಿದರು.

ADVERTISEMENT

ರಾಜ್ಯ ಸರ್ಕಾರವು ಪಟ್ಟಣದ ಎಲ್ಲಾ ಒಂಬತ್ತು ಪುರಸಭೆಯ ವಾರ್ಡ್‌ಗಳನ್ನು ಭೂಕುಸಿತಕ್ಕೆ ಸಂಬಂಧಿಸಿದಂತೆ ವಿಪತ್ತು ಪೀಡಿತ ಪ್ರದೇಶ ಎಂದು ಘೋಷಿಸಿದೆ. ಈ ಪ್ರದೇಶದಲ್ಲಿ 500 ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿವೆ. ಜೋಶಿಮಠ ಪಟ್ಟಣದಲ್ಲಿ ಅಪಾಯಕಾರಿ ಮಟ್ಟದಲ್ಲಿ ಬಿರುಕು ಬಿಟ್ಟಿರುವ ಮನೆಗಳಲ್ಲಿನ 600 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಆದೇಶ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.