ADVERTISEMENT

ಬಿಜೆಪಿ ಸಂಸದರ ಸಭೆಯಲ್ಲಿ ಐಕ್ಯತೆಯ ಮಂತ್ರ ಪಠಿಸಿದ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 6:34 IST
Last Updated 3 ಮಾರ್ಚ್ 2020, 6:34 IST
ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದರ ಸಭೆ
ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದರ ಸಭೆ   

ನವದೆಹಲಿ: ಇಂದು ಬೆಳಿಗ್ಗೆ ನಡೆದ ಬಿಜೆಪಿ ಸಂಸದರ ಸಭೆಯಲ್ಲಿ ಪ್ರಧಾನಿ ಮೋದಿ ಶಾಂತಿ, ಸಾಮರಸ್ಯ ಮತ್ತು ಐಕ್ಯತೆಯ ಮಂತ್ರ ಪಠಿಸಿದ್ದಾರೆ.

ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರದ ಅಭಿವೃದ್ಧಿಗಾಗಿ ಈ ಮೌಲ್ಯಗಳು ಅವಶ್ಯಕವೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿಯೇ ತಮ್ಮ ಪಕ್ಷದ ಮಂತ್ರವೆಂದು ಪ್ರತಿಪಾದಿಸಿದ ಅವರು ಮೌಲ್ಯಗಳನ್ನು ಅನುಸರಿಸಬೇಕೆಂದು ಪಕ್ಷದ ಮುಖಂಡರಿಗೆ ಕರೆ ನೀಡಿದ್ದಾರೆ.‌

ADVERTISEMENT

‘ದೇಶದ ಅಭಿವೃದ್ಧಿಗೆ ಶಾಂತಿ, ಸಾಮರಸ್ಯ ಮತ್ತು ಐಕ್ಯತೆ ಅಗತ್ಯ. ಆದರೆ, ಕೆಲವರು ತಮ್ಮ ಪಕ್ಷಗಳಿಗಾಗಿ ಬದುಕುತ್ತಿದ್ದಾರೆ. ನಾವು ದೇಶಕ್ಕಾಗಿ ಬದುಕುತ್ತೇವೆ’ ಎಂದು ಪ್ರಧಾನಿ ಹೇಳಿದ್ದಾರೆ.

ಕೆಲ ಬಿಜೆಪಿ ನಾಯಕರ ದ್ವೇಷದ ಭಾಷಣಗಳು ಜನರನ್ನು ಪ್ರಚೋದಿಸುತ್ತಿವೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಶಾಂತಿ ಮಂತ್ರ ಪಠಿಸಿದ್ದು ಮಹತ್ವ ಪಡೆದುಕೊಂಡಿದೆ.

ಸಿಎಎ ಪರ–ವಿರೋಧ ಗುಂಪುಗಳ ನಡುವೆ ಕಳೆದ ವಾರ ರಾಷ್ಟ್ರ ರಾಜಧಾನಿಯಲ್ಲಿ ಆರಂಭವಾದ ಸಂಘರ್ಷ ಈಶಾನ್ಯ ದೆಹಲಿಯಲ್ಲಿ ದೊಡ್ಡ ದುರಂತವನ್ನೇ ಸೃಷ್ಟಿಸಿತ್ತು. ಹಿಂಸಾಚಾರದಲ್ಲಿ 47 ಜನರು ಪ್ರಾಣ ಕಳೆದುಕೊಂಡಿದ್ದರು. ನೂರಾರು ಮಂದಿಗೆ ಗಾಯಗಳಾಗಿದ್ದವು. ಆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸಾಮರಸ್ಯ ಮತ್ತು ಐಕ್ಯತೆಯ ಬಗ್ಗೆ ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.