ADVERTISEMENT

ಮಮತಾ ವಿರುದ್ಧ ಮಾನಹಾನಿಕರ ಹೇಳಿಕೆ: ಸುವೇಂದು ವಿರುದ್ಧ ಹಕ್ಕುಚ್ಯುತಿ ನಿರ್ಣಯ

ಪಿಟಿಐ
Published 11 ಜೂನ್ 2025, 12:38 IST
Last Updated 11 ಜೂನ್ 2025, 12:38 IST
ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ (ಪಿಟಿಐ ಚಿತ್ರ)
ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ (ಪಿಟಿಐ ಚಿತ್ರ)   

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕರು ಮಂಡಿಸಿದ ಹಕ್ಕುಚ್ಯುತಿ ನಿರ್ಣಯವನ್ನು ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಅಂಗೀಕರಿಸಿದ್ದಾರೆ.

ಈ ಪ್ರಸ್ತಾವನೆಯನ್ನು ವಿಶೇಷ ಹಕ್ಕುಗಳ ಸಮಿತಿಗೆ ಕಳುಹಿಸಲಾಗಿದ್ದು, ಮುಂದಿನ ಅಧಿವೇಶನದ ವೇಳೆಗೆ ಅದು ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಬಿಮನ್ ಬ್ಯಾನರ್ಜಿ ಹೇಳಿದ್ದಾರೆ.

ಮುಂದಿನ ಅಧಿವೇಶನ ಸೆಪ್ಟೆಂಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ವಿಧಾನಸಭೆ ಮೂಲಗಳು ತಿಳಿಸಿವೆ.

ADVERTISEMENT

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸದನದಲ್ಲಿ ಮಾಡಿದ ಭಾಷಣದಲ್ಲಿ ನೆರೆರಾಷ್ಟ್ರ ಪಾಕಿಸ್ತಾನವನ್ನು ಹೊಗಳಿದ್ದಾರೆ ಎಂದು ಆರೋಪಿಸಿ ಸುವೇಂದು ಅಧಿಕಾರಿ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ವಿಶೇಷ ಹಕ್ಕುಗಳ ಉಲ್ಲಂಘನೆ ನಿರ್ಣಯವನ್ನು ಮಂಡಿಸಲಾಯಿತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ನಾಯಕರು, ‘ಸುವೇಂದು ಅಧಿಕಾರಿ ಸದನದ ಹೊರಗೆ ಈ ಹೇಳಿಕೆಗಳನ್ನು ನೀಡಿದ್ದಾರೆ. ಹಾಗಾಗಿ ಈ ವಿಷಯವನ್ನು ವಿಶೇಷ ಹಕ್ಕುಗಳ ಉಲ್ಲಂಘನೆ ನಿರ್ಣಯದ ಅಡಿಯಲ್ಲಿ ತರಲಾಗುವುದಿಲ್ಲ’ ಎಂದು ಬೇಸರ ಹೊರಹಾಕುವ ಮೂಲಕ ಸಭಾತ್ಯಾಗ ಮಾಡಿದ್ದಾರೆ.

ಚಂದ್ರಿಮಾ ಭಟ್ಟಾಚಾರ್ಯ, ಶೋವಂದೇವ್‌ ಚಟ್ಟೋಪಾಧ್ಯಾಯ, ಅರೂಪ್ ಬಿಸ್ವಾಸ್, ಇಂದ್ರನೀಲ್ ಸೇನ್ ಮತ್ತು ನಿರ್ಮಲ್ ಘೋಷ್ ಸೇರಿದಂತೆ ಹಿರಿಯ ಟಿಎಂಸಿ ಸಚಿವರು ಮತ್ತು ಶಾಸಕರು ಈ ಪ್ರಸ್ತಾವನೆಗೆ ಸಹಿ ಹಾಕಿದ್ದಾರೆ.

ದೇಶದ ಪಶ್ಚಿಮ ಗಡಿಯುದ್ದಕ್ಕೂ ಭಯೋತ್ಪಾದಕ ಕೇಂದ್ರಗಳ ಮೇಲೆ ನಿಖರ ದಾಳಿ ನಡೆಸಿದ ಭಾರತೀಯ ಸೇನಾಪಡೆಗಳ ಶೌರ್ಯವನ್ನು ಶ್ಲಾಘಿಸುವ ನಿರ್ಣಯವನ್ನು ಪಶ್ಚಿಮ ಬಂಗಾಳ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿತ್ತು.

ಈ ನಿರ್ಣಯದಲ್ಲಿ ‘ಆಪರೇಷನ್‌ ಸಿಂಧೂರ’ ಎಂಬ ಪದದ ಉಲ್ಲೇಖವಿಲ್ಲ. ರಾಷ್ಟ್ರದ ಭದ್ರತೆಯನ್ನು ಕಾಪಾಡುವಲ್ಲಿ ಸಶಸ್ತ್ರ ಪಡೆಗಳ ಅಚಲ ಧೈರ್ಯವನ್ನು ಶ್ಲಾಘಿಸುವ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಲಾಗಿತ್ತು.

ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರದ ವೈಫಲ್ಯದಿಂದಲೇ 26 ಜೀವಗಳ ಹಾನಿಯಾಯಿತು ಎಂದು ದೂರಿದ್ದರು.

ಬ್ಯಾನರ್ಜಿ ಹೇಳಿಕೆಗೆ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಷ್ಟ್ರೀಯ ದುರಂತವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸುವೇಂದು ಅಧಿಕಾರಿ ಟೀಕಿಸಿದ್ದರು. ಟಿಎಂಸಿ– ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.