ADVERTISEMENT

ಅಮೆರಿಕ ಪ್ರವಾಸಕ್ಕೆ ನಿರಾಕರಣೆ | ಪ್ರಿಯಾಂಕ್‌ ಕೋರ್ಟ್‌ ಮೊರೆ ಹೋಗಬಹುದು: ಚಿದಂಬರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜೂನ್ 2025, 13:03 IST
Last Updated 20 ಜೂನ್ 2025, 13:03 IST
ಚಿದಂಬರಂ
ಚಿದಂಬರಂ   

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಅಧಿಕೃತ ಪ್ರವಾಸದ ಮೇಲೆ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊಗೆ ತೆರಳಬೇಕಿತ್ತು. ಆದರೆ ವಿದೇಶಾಂಗ ಸಚಿವಾಲಯವು ಅನುಮತಿ ನಿರಾಕರಿಸಿತ್ತು. ವಿದೇಶಾಂಗ ಸಚಿವಾಲಯದ ಈ ಕ್ರಮಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಚಿದಂಬರಂ, 'ಹೂಡಿಕೆದಾರರು ಹಾಗೂ ಬುದ್ಧಿಜೀವಿಗಳನ್ನು ಭೇಟಿ ಮಾಡಲು ತೆರಳುತ್ತಿದ್ದ ತಂಡದ ನೇತೃತ್ವ ವಹಿಸಿದ್ದ ನನಗೆ ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಿಸಲಾಗಿದೆ ಎನ್ನುವ ಪ್ರಿಯಾಂಕ್‌ ಖರ್ಗೆಯವರ ಆರೋಪಕ್ಕೆ ಕೇಂದ್ರ ಸರ್ಕಾರ ಉತ್ತರಿಸಬೇಕು' ಎಂದು ಆಗ್ರಹಿಸಿದ್ದಾರೆ.

'ಕೇಂದ್ರ ನೀಡಿದ ಉತ್ತರ ತೃಪ್ತಿಕರವಿಲ್ಲದಿದ್ದರೆ, ಪ್ರಿಯಾಂಕ್ ಅವರು ಅನುಮತಿ ನಿರಾಕರಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು' ಎಂದಿದ್ದಾರೆ.

ADVERTISEMENT

'ಪ್ರಯಾಣ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕುಗಳಾಗಿವೆ. ಈ ಬಗ್ಗೆ ಅವರು ಕೋರ್ಟ್‌ ಮೊರೆ ಹೋಗಬಹುದು' ಎಂದೂ ಚಿದಂಬರಂ ಸಲಹೆ ನೀಡಿದ್ದಾರೆ.

ಎಂಇಎಗೆ ಪತ್ರ ಬರೆಯುತ್ತೇನೆ– ಪ್ರಿಯಾಂಕ್‌ ಖರ್ಗೆ

ನನಗೆ ಅಮೆರಿಕಕ್ಕೆ ತೆರಳಲು ಅನುಮತಿ ನೀಡದಿರಲು ಕಾರಣವೇನೆಂದು ವಿವರಣೆ ಪಡೆಯಲು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (ಎಂಇಎ) ಪತ್ರ ಬರೆಯುತ್ತೇನೆ’ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ್ದ ಅವರು, ‘ಅಮೆರಿಕಕ್ಕೆ ನಿಯೋಗ ಹೋಗುವುದಾಗಿ ಮೇ 15ರಂದು ಎಂಇಎಗೆ ಮಾಹಿತಿ ನೀಡಲಾಗಿತ್ತು. ಯಾವುದೇ ಕಾರಣ ಕೊಡದೆ ಜೂನ್ 4ಕ್ಕೆ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಜೂನ್‌ 6ರಂದು ನನ್ನ ಹೆಸರು ತೆಗೆದು ನಿಯೋಗದಲ್ಲಿದ್ದ ಅಧಿಕಾರಿಗಳ ಹೆಸರನ್ನು ಮಾತ್ರ ಎಂಇಎಗೆ ಕಳುಹಿಸಿದೆ. ಅದಕ್ಕೆ 11ರಂದು ಅನುಮತಿ ನೀಡಿದ್ದಾರೆ. 12ರಂದು ಶರತ್ ಬಚ್ಚೇಗೌಡ ಹೆಸರನ್ನು ಕಳುಹಿಸಿದೆ. 14ಕ್ಕೆ ಅವರಿಗೂ ಅನುಮತಿ ನೀಡಲಾಗಿದೆ. ಆದರೆ, ನನಗೆ ಮಾತ್ರ ಅನುಮತಿ ನಿರಾಕರಿಸಲಾಗಿದೆ. ಈ ಬಗ್ಗೆ ಎಂಇಎಯಿಂದ ಸ್ಪಷ್ಟೀಕರಣ ಕೋರುತ್ತೇನೆ. ಪ್ರಧಾನಿಗೆ ಪತ್ರ ಬರೆದು ಸ್ಪಷ್ಟೀಕರಣ ಪಡೆಯುವಂತೆ ಮುಖ್ಯಮಂತ್ರಿಯವರಿಗೂ ಮನವಿ ಮಾಡುತ್ತೇನೆ‘ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.