
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಮತ್ತು ಪ್ರಿಯಾಂಕ್ ಖರ್ಗೆ
ಪಿಟಿಐ ಚಿತ್ರ
ಗುವಾಹಟಿ: ಸೆಮಿಕಂಡಕ್ಟರ್ ಯುನಿಟ್‌ನಂತಹ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಲು ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಾವಂತರ ಕೊರತೆ ಇದೆ ಎಂದು ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿರುವುದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲು ಯೋಚಿಸಲಾಗುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.
ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸದ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಸಿಎಂ, ‘ಪ್ರಿಯಾಂಕ್ ಖರ್ಗೆ ಫಸ್ಟ್ ಕ್ಲಾಸ್ ಇಡಿಯಟ್’. ಅವರು ಅಸ್ಸಾಮಿ ಯುವಕರನ್ನು ಅವಮಾನಿಸಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ’ ಎಂದಿದ್ದಾರೆ.
ಕರ್ನಾಟಕಕ್ಕೆ ಮೀಸಲಾದ ಹೂಡಿಕೆಗಳನ್ನು ಕೇಂದ್ರವು ಗುಜರಾತ್ ಮತ್ತು ಅಸ್ಸಾಂ ಕಡೆಗೆ ತಿರುಗಿಸುತ್ತಿದೆ ಎಂದು ಪ್ರಿಯಾಂಕ್ ಸುದ್ದಿವಾಹಿನಿಯೊಂದಕ್ಕೆ ದುರುದ್ದೇಶಪೂರಿತ ಹೇಳಿಕೆ ನೀಡಿದ್ದರು. ಅಸ್ಸಾಂನಲ್ಲಿ ವಿದ್ಯಾವಂತ, ಸಮರ್ಥ ಯುವಕರಿಲ್ಲ ಎಂದು ಅವರು ಹೇಳಿರುವುದರಿಂದ ನಾವು ಅವರ ವಿರುದ್ಧ ಪ್ರಕರಣ ದಾಖಲಿಸಬಹುದು. ಅದು ಅಸ್ಸಾಂ ಯುವಕರಿಗೆ ಮಾಡಿದ ಅವಮಾನ. ಆದ್ದರಿಂದ, ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬಹುದೇ ಎಂದು ನಾವು ಪರಿಗಣಿಸುತ್ತಿದ್ದೇವೆ’ ಎಂದಿದ್ದಾರೆ.