ADVERTISEMENT

ಉತ್ತರ ಪ್ರದೇಶ: ರೈತರ ಸಂಪೂರ್ಣ ಸಾಲ ಮನ್ನಾ ಭರವಸೆ ನೀಡಿದ ಪ್ರಿಯಾಂಕಾ ಗಾಂಧಿ

ಪಿಟಿಐ
Published 23 ಅಕ್ಟೋಬರ್ 2021, 11:46 IST
Last Updated 23 ಅಕ್ಟೋಬರ್ 2021, 11:46 IST
   

ಲಖನೌ: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಪೂರ್ಣ ಮನ್ನಾ ಮಾಡುವುದಾಗಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಘೋಷಿಸಿದರು.

‌ಅವರು ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಕಾಂಗ್ರೆಸ್‌ನ ‘ಪ್ರತಿಜ್ಞಾ ಯಾತ್ರೆ’ಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

12ನೇ ತರಗತಿ ತೇರ್ಗಡೆಯಾದ ಬಾಲಕಿಯರಿಗೆ ಸ್ಮಾರ್ಟ್‌ಫೋನ್‌ಗಳು ಮತ್ತು ಪದವೀಧರ ಬಾಲಕಿಯರಿಗೆ ಇ-ಸ್ಕೂಟಿ ಜೊತೆಗೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 40 ರಷ್ಟು ಟಿಕೆಟ್ ನೀಡುವುದಾಗಿ ಈ ಹಿಂದೆ ನೀಡಿದ್ದ ಘೋಷಣೆಗಳನ್ನು ಅವರು ಪುನರುಚ್ಚರಿಸಿದರು.

ADVERTISEMENT

ರೈತರ ಸಂಪೂರ್ಣ ಸಾಲ ಮನ್ನಾ, ಗೋಧಿಗೆ ₹ 2, 500 ಕನಿಷ್ಠ ಬೆಂಬಲ ಬೆಲೆ, 20 ಲಕ್ಷ ಜನರಿಗೆ ಸರ್ಕಾರಿ ಉದ್ಯೋಗ, ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಆರ್ಥಿಕ ನಷ್ಟ ಎದುರಿಸಿದ ಕುಟುಂಬಗಳಿಗೆ ಸಂಕಷ್ಟದಿಂದ ದೂರ ಬರಲು ₹25,000 ನೆರವು ನೀಡಲಾಗುವುದು. ಅದರ ಜತೆಗೆ ವಿದ್ಯುತ್‌ ಬಿಲ್‌ಗಳನ್ನು ಅರ್ಧಕ್ಕೆ ಇಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ವಾರದೊಳಗೆ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ತರಲಾಗುವುದು ಎಂದು ಪ್ರಿಯಾಂಕಾ ಇದೇ ವೇಳೆ ತಿಳಿಸಿದರು.

ಯಾತ್ರೆಯು ರಾಜ್ಯದ ಮೂರು ವಿಭಿನ್ನ ಮಾರ್ಗಗಳಲ್ಲಿ ತೆರಳಲಿದೆ. ಬಾರಾಬಂಕಿಯಿಂದ ಬುಂದೇಲ್‌ಖಂಡ್, ಸಹರಾನ್‌ಪುರದಿಂದ ಮಥುರಾ ಮತ್ತು ವಾರಾಣಸಿಯಿಂದ ರಾಯ್ ಬರೇಲಿಯವರೆಗೆ ಯಾತ್ರೆ ಸಾಗಲಿದೆ. ‘ಹಮ್‌ ವಚನ್ ನಿಭಾಯೇಂಗೆ’ ಘೋಷಣೆಯೊಂದಿಗೆ ಆರಂಭವಾಗಿರುವ ಯಾತ್ರೆಯು ನವೆಂಬರ್‌ 1ರವರೆಗೆ ವಿವಿಧೆಡೆ ಸಂಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.