ADVERTISEMENT

ಗೋವಾದಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ: ಮಹಿಳೆಯರಿಗೆ ಶೇ 30ರಷ್ಟು ಮೀಸಲು ಭರವಸೆ

ಗೋವಾದಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2022, 1:24 IST
Last Updated 8 ಫೆಬ್ರುವರಿ 2022, 1:24 IST
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ   

ಪಣಜಿ (ಪಿಟಿಐ): ಗೋವಾದಲ್ಲಿ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿಗಾಗಿ ₹500 ಕೋಟಿ ಒದಗಿಸಲಾಗುವುದು ಮತ್ತು ಸರ್ಕಾರಿ ಉದ್ಯೋಗದಲ್ಲಿಶೇಕಡಾ 30ರಷ್ಟನ್ನು ಮಹಿಳೆಯರಿಗೆ ಮೀಸಲು ಇರಿಸಲಾಗುವುದು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭರವಸೆ ಕೊಟ್ಟಿದ್ದಾರೆ.

ಗೋವಾದ ನ್ಯುವೆಮ್‌ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪ್ರಿಯಾಂಕಾ ಅವರು ಮಾತನಾಡಿದರು.

ಸರ್ಕಾರಿ ಉದ್ಯೋಗದ ನೇಮಕಾತಿಯ ಹಗರಣಗಳನ್ನು ತಡೆಯಲು ಸಿಬ್ಬಂದಿ ಆಯ್ಕೆ ಆಯೋಗವನ್ನು ರಚಿಸಲಾಗುವುದು. ದುರ್ಬಲ ವರ್ಗಗಳ ಕುಟುಂಬಗಳಿಗೆ ತಿಂಗಳಿಗೆ ₹6,000 ನೀಡುವ ನ್ಯಾಯ ಯೋಜನೆಯನ್ನೂ ಜಾರಿ ಮಾಡಲಾಗುವುದು. ಇದು ಕುಟುಂಬಗಳಿಗೆ ನೆರವಾಗು ವುದಲ್ಲದೆ, ಅರ್ಥ ವ್ಯವಸ್ಥೆಗೆ ಹಣ ಹರಿದು ಬರುವಂತೆಯೂ ಮಾಡಲಿದೆ ಎಂದು ಪ್ರಿಯಾಂಕಾ ವಿವರಿಸಿ ದ್ದಾರೆ.

ADVERTISEMENT

ಕೆಲಸ ಮಾಡುವ ಮಹಿಳೆಯರಿಗಾಗಿ ಮಾರ್ಗೋವಾ ಮತ್ತು ಪಣಜಿಯಲ್ಲಿ ಹಾಸ್ಟೆಲ್‌ ನಿರ್ಮಿಸಲಾಗುವುದು. ಮಹಿಳಾ ಉಸ್ತುವಾರಿಯ ಪೊಲೀಸ್‌ ಠಾಣೆಗಳ ಸಂಖ್ಯೆ ಹೆಚ್ಚಿಸಲಾಗುವುದು. ಪೆಟ್ರೋಲ್‌ ಮತ್ತು ಡೀಸೆಲ್‌ ದರವು ಲೀಟರ್‌ಗೆ ₹80ರಿಂದ ಹೆಚ್ಚಳ
ಆಗದಂತೆ ನೋಡಿಕೊಳ್ಳಲಾಗುವುದು. ಉಳಿದ ಮೊತ್ತವನ್ನು ಸಹಾಯಧನದ ಮೂಲಕ ಭರಿಸಲಾಗುವುದುಎಂದು ಕಾಂಗ್ರೆಸ್‌ ಪಕ್ಷವು ಭರವಸೆ ನೀಡಿದೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶೇ 40ರಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡುವ ನಿರ್ಧಾರವನ್ನು ಪ್ರಿಯಾಂಕಾ ಪುನರುಚ್ಚರಿಸಿದರು. ‘ಮಹಿಳೆಯರನ್ನು ರಾಜಕೀಯಕ್ಕೆ ತರಲು ನಾನು ಭಾರಿ ಪ್ರಯತ್ನ ನಡೆಸುತ್ತಿರುವುದು ನಿಮಗೆ ತಿಳಿದಿದೆ. ಇದಕ್ಕೆ ಎರಡು–ಮೂರು ಕಾರಣಗಳಿವೆ. ಮೊದಲನೆಯದಾಗಿ, ಜನಸಂಖ್ಯೆಯ ಶೇ 50ರಷ್ಟು ಮಹಿಳೆಯರು ಇದ್ದಾರೆ. ಹಾಗಾಗಿ, ಶೇ 50ರಷ್ಟು ಪ್ರಾತಿನಿಧ್ಯ ಹೊಂದುವುದು ಮಹಿಳೆಯರ ಹಕ್ಕು’ ಎಂದು ಪ್ರಿಯಾಂಕಾ ಪ್ರತಿಪಾದಿಸಿದರು.

‘ಈಗಿನ ರಾಜಕಾರಣವು ದ್ವೇಷ, ಸಿಟ್ಟಿನಿಂದ ತುಂಬಿ ಹೋಗಿದೆ. ಶೇಕಡಾ 90ರಷ್ಟು ಭಾಷಣಗಳು ನಕಾರಾತ್ಮಕ ವಾಗಿವೆ. ಸಕಾರಾತ್ಮಕ ಅಂಶಗಳೇ ಇಲ್ಲ. ಮಹಿಳೆಯರು ವಾಸ್ತವದ ನೆಲೆಗಟ್ಟಿನಲ್ಲಿ ಯೋಚಿಸುವುದರಿಂದ ರಾಜಕಾರಣಕ್ಕೆ ಸಕಾರಾತ್ಮಕತೆ ಮತ್ತು ಮಮತೆಯನ್ನು ತುಂಬುವುದು ಸಾಧ್ಯ ಎಂಬುದು ನನ್ನ ದೃಢವಾದ ನಂಬಿಕೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.