ADVERTISEMENT

Bihar Elections| ಮತದಾರರ ಖರೀದಿಗೆ ಎನ್‌ಡಿಎ ಯತ್ನ: ಪ್ರಿಯಾಂಕಾ ಗಾಂಧಿ ಆರೋಪ

ಪಿಟಿಐ
Published 26 ಸೆಪ್ಟೆಂಬರ್ 2025, 13:37 IST
Last Updated 26 ಸೆಪ್ಟೆಂಬರ್ 2025, 13:37 IST
<div class="paragraphs"><p>ಪಟ್ನಾದಲ್ಲಿ ಶುಕ್ರವಾರ ನಡೆದ ‘ಮಹಿಳಾ ಸಂವಾದ’ದಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬೆಂಬಲಿಗರ ಜತೆ ಸೆಲ್ಫಿ ತೆಗೆದುಕೊಂಡರು</p></div>

ಪಟ್ನಾದಲ್ಲಿ ಶುಕ್ರವಾರ ನಡೆದ ‘ಮಹಿಳಾ ಸಂವಾದ’ದಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬೆಂಬಲಿಗರ ಜತೆ ಸೆಲ್ಫಿ ತೆಗೆದುಕೊಂಡರು

   

–ಪಿಟಿಐ ಚಿತ್ರ

ಪಟ್ನಾ: ‘ಬಿಜೆಪಿ ನೇತೃತ್ವದ ಎನ್‌ಡಿಎ ನೀಡುತ್ತಿರುವ ಕೊಡುಗೆಗಳಿಗೆ ಮರುಳಾಗಬೇಡಿ, ಅವರಿಗೆ ನಿಮ್ಮ ಮತದ ಮೇಲಷ್ಟೇ ಆಸಕ್ತಿಯಿದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಆರೋಪಿಸಿದರು.

ADVERTISEMENT

ಬಿಹಾರ ಕಾಂಗ್ರೆಸ್‌ ಸಮಿತಿಯ ಕೇಂದ್ರ ಕಚೇರಿಯಲ್ಲಿ ನಡೆದ ‘ಮಹಿಳಾ ಸಂವಾದ’ದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ನಿಜವಾದ ಉದ್ದೇಶಗಳನ್ನು ಅರ್ಥಮಾಡಿಕೊಂಡು, ಜಾಗೃತರಾಗಿರಿ’ ಎಂದು ಕರೆ ನೀಡಿದರು.

‘ಚುನಾವಣೆ ಸಂದರ್ಭದಲ್ಲಿ ಕೊಡುಗೆಗಳನ್ನು ನೀಡುವ ಮೂಲಕ ನಿಮ್ಮನ್ನು ವಂಚಿಸಲು ಎನ್‌ಡಿಎ ಯತ್ನಿಸುತ್ತಿದೆ. ಆದರೆ ಕಾಂಗ್ರೆಸ್‌ ಪಕ್ಷ ಮಹಿಳೆಯರಿಗೆ ಸದಾ ಗೌರವ ನೀಡುತ್ತಾ ಬಂದಿದೆ’ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್‌ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು 75 ಲಕ್ಷ ಮಹಿಳೆಯರಿಗೆ ತಲಾ ₹10,000ದಂತೆ ₹7,500 ಕೋಟಿ ವರ್ಗಾಯಿಸಿದ್ದನ್ನು ಉಲ್ಲೇಖಿಸಿದ ಪ್ರಿಯಾಂಕಾ, ‘ಚುನಾವಣೆ ಬಂತೆಂದು ಅವರು ಇಷ್ಟೆಲ್ಲ ಕೊಡುಗೆಗಳನ್ನು ನೀಡುತ್ತಿದ್ದಾರೆ. ಆದರೆ ಪ್ರತಿ ತಿಂಗಳು ಈ ದೇಣಿಗೆ ಮುಂದುವರಿಯುತ್ತದೆ ಎಂಬ ಭರವಸೆಯನ್ನು ಅವರು ನೀಡಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ’ ಎಂದರು.  

‘ಚುನಾವಣೆ ಸಮೀಪಿಸುತ್ತಿರುವಾಗ ಹಣ ನೀಡುತ್ತಿದ್ದಾರೆ ಅಂದರೆ ಅವರ ಕಣ್ಣು ನಿಮ್ಮ ಮತಗಳ ಮೇಲಷ್ಟೇ ಇದೆ ಎಂಬುದು ಅತ್ಯಂತ ಸ್ಪಷ್ಟವಾಗಿದೆ. ಅವರಿಗೆ ನಿಮ್ಮ ಗೌರವ, ಸುರಕ್ಷತೆಗಿಂತೆ ಮತವೇ ಮುಖ್ಯ. 10 ವರ್ಷಗಳಲ್ಲಿ ಬಿಹಾರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿರುವುದೇ ಅದಕ್ಕೆ ನಿದರ್ಶನ’ ಎಂದು ದೂರಿದರು.   

‘ಕಾಂಗ್ರೆಸ್‌ ಪಕ್ಷವು ಮಹಿಳೆಯ ಗೌರವ ಮತ್ತು ಹಿತವನ್ನು ಬಯಸುತ್ತದೆ. ಭೂರಹಿತ ಕುಟುಂಬಗಳಿಗೆ ಜಮೀನು ನೀಡುವ ಭರವಸೆಯನ್ನು ನಾವು ನೀಡಿದ್ದೇವೆ. ಅಂತಹ ಜಮೀನನ್ನು ಕುಟುಂಬದ ಮಹಿಳಾ ಸದಸ್ಯರ ಹೆಸರಿನಲ್ಲಿ ನೋಂದಾಯಿಸಬೇಕು ಎಂದು ನಾನು ಪ್ರಸ್ತಾಪಿಸುತ್ತೇನೆ’ ಎಂದು ಅವರು ವಿವರಿಸಿದರು.

ಬಿಹಾರದಲ್ಲಿ ‘ಇಂಡಿಯಾ’ ಬಣ ಅಧಿಕಾರಕ್ಕೆ ಬಂದರೆ ಹೊಸ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸುತ್ತೇವೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಜಾರಿಗೊಳಿಸಿದ್ದ ವೈದ್ಯಕೀಯ ವಿಮಾ ಯೋಜನೆ ಮಾದರಿಯಲ್ಲೇ ಇಲ್ಲೂ ಜಾರಿಗೊಳಿಸುತ್ತೇವೆ. ಈ ವಿಮೆಯಿಂದ ಪ್ರತಿ ವರ್ಷ ₹ 25 ಲಕ್ಷದವರೆಗಿನ ಚಿಕಿತ್ಸೆ ಪಡೆಯಬಹುದು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.